ಶೃಂಗೇರಿ: ತಾಲ್ಲೂಕಿನಲ್ಲಿ ಸುರಿದ ಭಾರಿ ಮಳೆಗೆ ಭಾನುವಾರ ತುಂಗಾನದಿಯಲ್ಲಿ ಪ್ರವಾಹ ಉಂಟಾಗಿದೆ.
ಪ್ರವಾಹ ಉಂಟಾಗಿದ್ದರಿಂದ ಶೃಂಗೇರಿಯ ಶಾರದಾ ಪೀಠದ ದರ್ಶನ ಪಡೆಯಲು ಭಾನುವಾರ ಬಂದಿದ್ದ ಪ್ರವಾಸಿಗರಿಗೆ ಮಳೆಯಿಂದ ತೊಂದರೆಯಾಯಿತು. ಶಾರದಾ ಪೀಠದ ಭಾರತೀತೀರ್ಥ ಸ್ವಾಮೀಜಿಯವರ ಸ್ನಾನಘಟ್ಟ ಹಾಗೂ ಸಂಧ್ಯಾವಂದನೆ ಮಂಟಪ ಮುಳುಗಿದೆ. ನದಿಯ ಪ್ರವಾಹದಲ್ಲಿ ಕಾಳಿಂಗ ಸರ್ಪದಂತಹ ಜೀವ ಜಂತುಗಳು, ಮರದ ದಿಮ್ಮಿಗಳು ತೇಲಿ ಹೋದವು.
ತಾಲ್ಲೂಕಿನ ಜಲಪಾತಗಳಾದ ನರಸಿಂಹ ಪರ್ವತದ ಎರಡು ಕೊಳಗಳು, ಬರ್ಕಣ, ಸಿರಿಮನೆ, ಸೂತನಬ್ಬಿ ಮುಂತಾದ ಜಲಪಾತಗಳು ಉಕ್ಕಿ ಹರಿಯುತ್ತಿದೆ.
ಮಳೆಯಿಂದ ನೆಮ್ಮಾರ್, ಕೆರೆಕಟ್ಟೆ, ಕುರಬಕೇರಿ, ಭಾರತೀತೀರ್ಥ ರಸ್ತೆ, ಗಾಂಧಿ ಮೈದಾನ, ವಿದ್ಯಾರಣ್ಯಪುರ ರಸ್ತೆ, ಕಿಕ್ರೆ ಹಳ್ಳ ಸೇತುವೆ ಮೇಲೆ, ಕೆರೆಕಟ್ಟೆಯ ಗುಲುಗುಂಜಿ ಮನೆ ರಸ್ತೆ ನೀರಿನಿಂದ ತುಂಬಿ ವಾಹನ ಸಂಚಾರಕ್ಕೆ ತಡೆ ಉಂಟಾಗಿದೆ.
ತಾಲ್ಲೂಕಿನ 49 ಗ್ರಾಮಗಳಲ್ಲಿ ಶಿರ್ಲು, ಹಾದಿ, ಕೆರೆ, ಸುಂಕದಮಕ್ಕಿ, ನಿಲಂದೂರು, ಕುಂಬ್ರಗೋಡು, ಕೂಗೋಡು ಮೊದಲಾದ ಗ್ರಾಮಗಳು ಪಟ್ಟಣದಿಂದ 25 ರಿಂದ 30 ಕಿಲೋ ಮೀಟರ್ ದೂರವಿದ್ದು, ಇಲ್ಲಿನ ರಸ್ತೆಗಳು ಹದಗೆಟ್ಟಿರುವುದರಿಂದ ಅನಾರೋಗ್ಯ, ಅಪಘಾತ ಸಂಭವಿಸಿದರೆ ಆಸ್ಪತ್ರೆಗೆ ಬರಲು ಅಲ್ಲಿನ ಜನ ಹರಸಾಹಸ ಪಡಬೇಕಿದೆ.
ಅತಿಯಾದ ಮಳೆಯ ಕಾರಣ ಅಂಗನವಾಡಿ, ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ಶಾಲಾ ಸೋಮವಾರ (ಆ.18) ರಜಾ ಘೋಷಿಸಲಾಗಿದೆ. ಪೊಲೀಸ್ ಹಾಗೂ ಅಗ್ನಿಶಾಮಕ ಸಿಬ್ಬಂದಿ ತೀವ್ರ ಕಟ್ಟೆಚ್ಚರ ವಹಿಸಿದ್ದಾರೆ.
ತಾಲ್ಲೂಕಿನ ಶೃಂಗೇರಿಯಲ್ಲಿ 132 ಮಿ.ಮೀ, ಕಿಗ್ಗಾದಲ್ಲಿ 152.8 ಮಿ.ಮೀ, ಕೆರೆಕಟ್ಟೆ 154 ಮಿ.ಮೀ ಮಳೆಯಾಗಿದೆ. ಒಟ್ಟು 3,475 ಮಿ.ಮೀ ಮಳೆಯಾಗಿದೆ. ಮಳೆಯಿಂದ ಶೃಂಗೇರಿಯಿಂದ ಮಂಗಳೂರಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 169ರ ನೆಮ್ಮಾರ್‌ನಲ್ಲಿ ರಸ್ತೆ ಜಲಾವೃತಗೊಂಡು ರಸ್ತೆ ಸಂಚಾರ ಸ್ಥಗಿತಗೊಂಡಿದೆ. ಶೃಂಗೇರಿಯ ಭಾರತೀತೀರ್ಥ ರಸ್ತೆ ನೀರಿನಿಂದ ಆವೃತಗೊಂಡಿದೆ. ಕುರುಬಕೇರಿ ರಸ್ತೆ ನೀರಿನಿಂದ ಆವೃತಗೊಂಡು ರಸ್ತೆಯ 2 ಕಡೆ ನೀರಿನಿಂದ ತುಂಬಿದ್ದು ಮಧ್ಯೆ ದ್ವೀಪದಂತಾಗಿದೆ.
Heavy rains cause flooding in Sringeri Tunga river
Leave a comment