ಚಿಕ್ಕಮಗಳೂರು: ನಗರದ ಕಲ್ಯಾಣ ನಗರದಲ್ಲಿರುವ ಅಂಬೇಡ್ಕರ್ ವಸತಿ ಶಾಲೆ ವಿದ್ಯಾರ್ಥಿಗಳು ಭಾನುವಾರ ಬೆಳಗ್ಗೆ ತಿಂಡಿ ಸೇವನೆ ಮಾಡಿದ ಕೆಲವೇ ನಿಮಿಷಗಳಲ್ಲಿ ನಾಲ್ವರು ವಿದ್ಯಾರ್ಥಿಗಳು ವಾಂತಿ ಮಾಡಿಕೊಂಡು ಅಸ್ವಸ್ಥರಾಗಿದ್ದಾರೆ. ಕೂಡಲೇ ವಿದ್ಯಾರ್ಥಿಗಳನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗಿದ್ದು, ವಿದ್ಯಾರ್ಥಿಗಳು ಚೇತರಿಸಿಕೊಂಡಿದ್ದಾರೆ.
ಮಕ್ಕಳ ಆರೋಗ್ಯ ಪರಿಶೀಲಿಸಿದ ಜಿಲ್ಲಾ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಚಂದ್ರಶೇಖರ್ ಕಲುಷಿತ ನೀರು ಅಥವಾ ಆಹಾರದಿಂದ ಮಕ್ಕಳು ಅಸ್ವಸ್ಥಗೊಂಡಿರಬಹುದು. ಮಕ್ಕಳಿಗೆ ಚಿಕಿತ್ಸೆ ನೀಡಲಾಗಿದೆ. ಇದೀಗ ಮಕ್ಕಳು ಚೇತರಿಸಿಕೊಂಡಿದ್ದು ಯಾವುದೇ ಸಮಸ್ಯೆ ಇಲ್ಲ. ಭಾನುವಾರ ಇಡೀ ದಿನ ಮಕ್ಕಳಿಗೆ ಚಿಕಿತ್ಸೆ ನೀಡಿ ಸೋಮವಾರ ಡಿಸ್ಚಾರ್ಜ್ ಮಾಡಲಾಗುವುದು ಎಂದು ಹೇಳಿದರು.
ಸ್ಥಳಕ್ಕೆ ಆಗಮಿಸಿದ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ಮಾಲತಿ, ಮಕ್ಕಳನ್ನು ಭೇಟಿ ಮಾಡಿ ಮಕ್ಕಳ ಆರೋಗ್ಯ ವಿಚಾರಿಸಿ ಪೋಷಕರಿಗೆ ಆತಂಕ ಪಡದಿರುವಂತೆ ಸಮಾಧಾನ ಹೇಳಿದರು
ಈ ವೇಳೆ ಮಾತನಾಡಿದ ಅವರು, ಮಕ್ಕಳು ಅಸ್ವಸ್ಥಗೊಂಡಿರುವ ಕುರಿತು ನನಗೆ ಮಾಹಿತಿ ಬಂದಿದ್ದು ಶಾಲೆಯ ಸಿಬ್ಬಂದಿಗಳೊಂದಿಗೆ ಈ ಬಗ್ಗೆ ಚರ್ಚಿಸಿ ಉತ್ತಮ ಚಿಕಿತ್ಸೆ ನೀಡುವಂತೆ ತಿಳಿಸಿದ್ದೆ, ಜಿಲ್ಲಾ ವೈದ್ಯಾಧಿಕಾರಿಗಳೊಂದಿಗೆ ಮಾತನಾಡಿದ್ದೇನೆ. ಮಕ್ಕಳ ಆರೋಗ್ಯದಲ್ಲಿ ಯಾವುದೇ ಸಮಸ್ಯೆ ಇಲ್ಲ. ಸೋಮವಾರ ಮಕ್ಕಳನ್ನು ಆಸ್ಪತ್ರೆಯಿಂದ ಶಾಲೆಗೆ ಕಳಿಸಲಾಗುವುದು. ಶಾಲೆಯಲ್ಲಿರುವ ಮಕ್ಕಳಿಗೂ ಏನು ಸಮಸ್ಯೆಯಾಗಿಲ್ಲ. ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ರೀತಿಯಲ್ಲಿ ಆಹಾರವನ್ನು ಪರಿಶೀಲಿಸಲಾಗುವುದು. ಮಕ್ಕಳ ಮೂಲಭೂತ ಸಮಸ್ಯೆಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಹೇಳಿದರು.
ವಿಷಯ ತಿಳಿಯುತ್ತಿದ್ದಂತೆ ದಲಿತ ಸಂಘರ್ಷ ಸಮಿತಿ ಸಂಚಾಲಕರಾದ ಬಾಲಕೃಷ್ಣ, ಮರ್ಲೆ ಅಣ್ಣಯ್ಯ, ದಲಿತ ಜನ ಸೇನೆಯ ಜಿಲ್ಲಾಧ್ಯಕ್ಷ ಅನಿಲ್ ಆನಂದ್, ಭೀಮ್ ಬ್ರಿಗೇಡ್ ಅಧ್ಯಕ್ಷ ಹರೀಶ್ ಮಿತ್ರ, ಸಮಾಜ ಸೇವಕರಾದ ಅಬ್ದುಲ್ ಕರೀಂ, ಡಿಸಿಓ ಶಿವಕುಮಾರ್ ಸ್ಥಳಕ್ಕೆ ಆಗಮಿಸಿದ ಮಕ್ಕಳ ಯೋಗ ಕ್ಷೇಮ ವಿಚಾರಿಸಿದರು.
ದೌರ್ಜನ್ಯ ನಿಯಂತ್ರಣ ಸಮಿತಿಯ ಸದಸ್ಯ ಹುಣಸೆಮಕ್ಕಿ ಲಕ್ಷ್ಮಣ್ ಮಾತನಾಡಿ, ಮಕ್ಕಳ ಆರೋಗ್ಯದಲ್ಲಿ ಸಣ್ಣ ಸಮಸ್ಯೆಯಾಗಿದೆ. ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರು ಕೂಡಲೇ ಸ್ಥಳಕ್ಕೆ ಆಗಮಿಸಿ ಈ ಘಟನೆಯ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ವಕೀಲರ ಸಂಘದ ಕಾರ್ಯದರ್ಶಿ ಅನಿಲ್ ಕುಮಾರ್ ಮಾತನಾಡಿ, ಕಲುಷಿತ ನೀರು ಹಾಗೂ ಆಹಾರ ಸೇವನೆಯಿಂದ ನಾಲ್ಕು ಮಕ್ಕಳು ಅಸ್ವಸ್ಥರಾಗಿದ್ದಾರೆ. ಮಕ್ಕಳಿಗೆ ಚಿಕಿತ್ಸೆ ನೀಡಲಾಗಿದ್ದು, ಮಕ್ಕಳು ಆರೋಗ್ಯದಿಂದಿದ್ದಾರೆ ಪಾಲಕರು ವದಂತಿಗಳಿಗೆ ಕಿವಿಗೊಡಬೇಡಿ ಎಂದರು.
ನಮ್ಮ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಅಗ್ನಿ ಸುಮಂತ್ ಮಾತನಾಡಿ, ಶಾಲೆಯಲ್ಲಿ ಹಲವು ಸಮಸ್ಯೆಗಳಿದ್ದು ಕೂಡಲೇ ಅದನ್ನು ಬಗೆಹರಿಸಬೇಕು ಎಂದು ಒತ್ತಾಯಿಸಿದರು.
Ambedkar Residential School students fall ill
Leave a comment