ಚಿಕ್ಕಮಗಳೂರು: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಸ್ವಯಂ ಸೇವಕರಾಗಿದ್ದ ಎಂ.ಕೆ.ವಾಸುದೇವ ಅವರು ಸಾವಿರಾರು ಸ್ವಯಂ ಸೇವಕರ ಬದುಕಿನಲ್ಲಿ ವ್ಯಕ್ತಿತ್ವ ರೂಪಿಸುವ ಕೆಲಸವನ್ನು ಮಾಡಿದ್ದಾರೆ. ನಿಯತ್ತು, ನಿಷ್ಟೆ ಎನ್ನುವ ಪ್ರೇರಣೆಯನ್ನು ನಮ್ಮಲ್ಲರಿಗೂ ಬಿತ್ತಿದವರು ಅವರು ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದರು.
ಕಾರ್ಕಳದ ಶಾಸಕರಾದ ವಿ.ಸುನೀಲ್ ಕುಮಾರ್ ಅವರ ತಂದೆಯವರೂ ಆದ ನಿವೃತ್ತ ಶಿಕ್ಷಕರು, ಆರ್‌ಎಸ್‌ಎಸ್‌ನ ಚಿಕ್ಕಮಗಳೂರು ಜಿಲ್ಲಾ ಕಾರ್ಯವಾಹ ಹಾಗೂ ಜಿಲ್ಲಾ ಬೌದ್ಧಿಕ್ ಪ್ರಮುಖ್ ಆಗಿ ಜವಾಬ್ದಾರಿ ನಿರ್ವಹಿಸಿದ್ದ ಎಂ.ಕೆ.ವಾಸುದೇವ (ಮಾಸು ಮಾಸ್ಟರ್) ಅವರು ಇತ್ತೀಚೆಗೆ ನಿಧನರಾದ ಹಿನ್ನೆಲೆಯಲ್ಲಿ ನಗರದ ಎಂಇಎಸ್ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ನುಡಿನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಾಸು ಮೇಷ್ಟ್ರು ಅವರು ಯಾವತ್ತೂ ಆಸ್ತಿ ಮಾಡಲಿಲ್ಲ. ಮಕ್ಕಳನ್ನೇ ಆಸ್ತಿ ಮಾಡಿದ್ದಾರೆ. ಅದರ ಪರಿಣಾಮ ಹಿಂದುತ್ವದ ವಿಚಾರ, ದೇಶದ ವಿಚಾರಗಳು ಬಂದರೆ ಗಟ್ಟಿಯಾಗಿ ರಾಜ್ಯದಲ್ಲಿ ಮಾತನಾಡುವ ಕೆಲವೇ ಜನರಲ್ಲಿ ಸುನೀಲ್ ಕುಮಾರ್ ಸಹ ಒಬ್ಬರು. ಅಷ್ಟೇ ಅಲ್ಲದೆ ತಮ್ಮ ಸಂಪರ್ಕಕ್ಕೆ ಬಂದ ಎಲ್ಲರಲ್ಲೂ ವಿಚಾರದ ವ್ಯಕ್ತಿತ್ವಗಳನ್ನು ಬಿತ್ತಿದವರು ವಾಸು ಮಷ್ಟ್ರು ಎಂದರು.
೧೯೯೧-೯೨ ರಲ್ಲಿ ವಾಸು ಮೇಷ್ಟ್ರು ಆಲ್ದೂರಿಗೆ ಬಂದರು. ಸಂಘದ ಬೌದ್ಧಿಕ್‌ನಲ್ಲಿ ಅವರ ಮಾತುಗಳನ್ನು ಕೇಳಿ ಮೈ ರೋಂಮಾಂಚನವಾಗಿತ್ತು. ಅವರೊಂದು ರೀತಿ ಅಗೋಚರ ಪ್ರಭಾವ ಬೀರಿದ್ದರು. ಇದ್ದಿಲಿನಂತಿದ್ದ ನಮ್ಮಂತಹವರಿಗೆ ವೈಚಾರಿಕತೆ ಎನ್ನುವ ಕೆಂಡದ ಸ್ಪರ್ಷವನ್ನು ಅವರು ಮಾಡಿದರು. ವಾಸು ಮೇಷ್ಟ್ರು ಅವರ ಮನೆ ನಮ್ಮ ಇಡೀ ಸಂಘ ಪರಿವಾರದ ಶಕ್ತಿ ಕೇಂದ್ರವಾಗಿತ್ತು ಎಂದರು.
ಹಾಸನ ವಿಭಾಗ ಆರ್‌ಎಸ್‌ಎಸ್‌ನ ಸಂಘಚಾಲಕರಾದ ಮಲ್ಲಿಕಾರ್ಜುನ ರಾವ್ ಮಾತನಾಡಿ, ನಿರಂತರವಾಗಿ ವಾಸು ಮೇಷ್ಟ್ರು ನಮ್ಮೊಂದಿಗಿರುತ್ತಾರೆ. ಅವರು ಎಲ್ಲರನ್ನೂ ಆತ್ಮೀಯತೆಯಿಂದ ಕಾಣುತ್ತಿದ್ದರು. ಎಲ್ಲ ಕಾರ್ಯಕರ್ತರಿಗೂ ಆದರ್ಶ ಹಾಗೂ ಪ್ರೇರಣಾದಾಯಕವಾಗಿದ್ದರು. ಅವರ ನಿತ್ಯ ಚಟುವಟಿಕೆಯಲ್ಲಿ ಪ್ರತಿ ವಿಷಯದಲ್ಲಿ ಮೇಲ್ಪಂಕ್ತಿಯಾಗಿ ನಮಗೆ ಕಾಣುತ್ತಿದ್ದರು ಎಂದು ತಿಳಿಸಿದರು.
ಬಿಜೆಪಿ ಮುಖಂಡ ಸಿ.ಹೆಚ್.ಲೋಕೇಶ್ ಮಾತನಾಡಿ, ವಾಸುದೇವ ಅವರು ದೇಶ ಭಕ್ತರನ್ನು ಸರಳವಾಗಿ, ಸಜ್ಜನಿಕೆಯಿಂದ ಗುರುತಿಸುವ ಕೆಲಸ ಮಾಡಿದರು. ಇಡೀ ಸಂಘದ ಎಲ್ಲಾ ಪರಿವಾರಕ್ಕೂ ಅವರು ಮಾರ್ಗದರ್ಶಕರಾಗಿದ್ದರು ಎಂದರು.
ಕಾರ್ಕಳ ಶಾಸಕ ವಿ.ಸುನೀಲ್ ಕುಮಾರ್ ನಮ್ಮ ತಂದೆ ವಾಸುದೇವ ಅವರು ನಮ್ಮ ಮನೆ ಸಂಘದ ಮನೆಯಾಗಬೇಕು ಎಂದುಕೊಂಡು ನಮ್ಮೆಲ್ಲರನ್ನೂ ಬೆಳೆಸಿದರು ಎಂದು ಗದ್ಗಧಿತರಾದರು.
೧೭ ನೇ ವಯಸ್ಸಿನಲ್ಲೇ ಸಿ.ಟಿ.ರವಿ ಅವರೊಂದಿಗೆ ಅಯೋಧ್ಯೆಗೆ ಹೋಗಿ ಬಂದ ನಂತರ ಚಿಕ್ಕಮಗಳೂರಿನಲ್ಲಿ ದೊಡ್ಡದಾದ ಎಬಿವಿಪಿ ಕಾರ್ಯಕ್ರಮವನ್ನು ಸಂಘಟಿಸಬೇಕೆಂದು ನಿರ್ಣಯಿಸಿದ್ದೆ. ಈ ವಿಚಾರವನ್ನು ತಂದೆಯವರ ಗಮನಕ್ಕೆ ತಂದು ಹಣಕಾಸಿನ ಅಗತ್ಯದ ಬಗ್ಗೆ ತಿಳಿಸಿದಾಗ ನಗರದ ಅರಳಿ ಮರದಿಂದ ಆಜಾದ್ ಪಾರ್ಕ್ ವರೆಗೆ ಜನರ ಬಳಿ ಹೋಗುವಂತೆ ಹೇಳಿದ್ದರು.
ಅದರಂತೆ ತಂದೆಯವರ ಹೆಸರು ಹೇಳಿಕೊಂಡೇ ಜನರ ಬಳಿ ಹೋದಾಗ ಉತ್ತಮ ಸ್ಪಂದನೆ ವ್ಯಕ್ತವಾಗಿತ್ತು. ಸಾಕಷ್ಟು ಹಣ ಸಂಗ್ರಹವಾಗಿತ್ತು. ಆದರೆ ನನ್ನ ಹೆಸರೇಳಿಕೊಂಡು ಇನ್ನು ಮುಂದೆ ಸಂಘಟನೆಯಲ್ಲಿ ಬೆಳೆಯುವಂತಿಲ್ಲ. ನಿನ್ನ ಸ್ವಂತಿಕೆಯಲ್ಲೇ ಬೆಳೆಯಬೇಕು ಎಂದು ಮರುದಿನವೇ ತಂದೆಯವರು ಮಾರ್ಗದರ್ಶನ ಮಾಡಿದ್ದರು ಎಂದು ನೆನಪಿಸಿಕೊಂಡರು.
ಪ್ರತಿನಿತ್ಯ ಸಂಘಟನೆಯಲ್ಲಿ ಕೆಲಸ ಮಾಡುವಾಗ ಆ ಸ್ವಂತಿಕೆ ಎನ್ನುವ ಪದ ಪದೇ ಪದೇ ನೆನಪಾಗುತ್ತಿತ್ತು. ಅದರ ಪರಿಣಾಮ ಎಬಿವಿಪಿ, ಆರ್‌ಎಸ್‌ಎಸ್, ಬಜರಂಗದಳ, ಶಾಸಕ, ಸಚಿವನಾಗಿ ಎಲ್ಲ ಸಂದರ್ಭದಲ್ಲಿ ನನ್ನ ಸ್ವಂತಿಕೆ ಎನ್ನುವುದು ಗಾಢವಾಗಿ ಮೂಡಿದೆ ಎಂದರು.
ನನ್ನ ಸ್ವಂತ ಕೆಲಸಕ್ಕೆ, ಪ್ರಭಾವಕ್ಕೆ ಸಂಘವನ್ನು ಬಳಸಿಕೊಳ್ಳುವುದಿಲ್ಲ ಎಂದು ನಿಶ್ಚಯ ಮಾಡಿದ್ದರು. ನನಗಾಗಿ ಒಂದು ಪೆಟ್ರೋಲ್ ಬಂಕ್‌ಗೆ ಕೇಂದ್ರದಿಂದ ಅನುಮತಿ ಕೊಡಿಸಲು ಪ್ರಾಂತ ಪ್ರಚಾರಕರಿಗೆ ಒಂದು ಪತ್ರ ಬರೆಯುಬೇಕೆಂಬ ನನ್ನ ಕೋರಿಕೆಯನ್ನು ಮುಲಾಜಿಲ್ಲದೆ ತಿರಸ್ಕರಿಸಿದ್ದರು ಎಂದರು
ವಾಸುದೇವ ಅವರ ಪತ್ನಿ ಪ್ರಮೋದಾ ವಾಸುದೇವ್, ಶಾಸಕ ಎಚ್.ಡಿ.ತಮ್ಮಯ್ಯ, ಮಾಜಿ ಶಾಸಕ ಡಿ.ಎನ್.ಜೀವರಾಜ್, ಮಾಜಿ ಶಾಸಕ ಬೆಳ್ಳಿ ಪ್ರಕಾಶ್, ಬಿಜೆಪಿ ಹಿರಿಯ ಮುಖಂಡ ಗಣೇಶ್ ರಾವ್, ಎಐಟಿ ಕಾಲೇಜು ರಿಜಿಸ್ಟ್ರಾರ್ ಸಿ.ಕೆ.ಸುಬ್ಬರಾಯ, ಕಾಫಿ ಮಂಡಳಿ ಅಧ್ಯಕ್ಷ ದೇವರುಂದ ದಿನೇಶ್, ಶೃಂಗೇರಿಯ ಉಮೇಶ್, ಅತ್ತಿಕಟ್ಟೆ ಜಗನ್ನಾಥ್, ಬಿಜೆಪಿ ಜಿಲ್ಲಾಧ್ಯಕ್ಷ ದೇವರಾಜ್ ಶೆಟ್ಟಿ, ಮತ್ತು ಆರ್‌ಎಸ್‌ಎಸ್ ಹಾಗೂ ಸಂಘ ಪರಿವಾರದ ಮುಖಂಡರುಗಳು ಕಾರ್ಯಕರ್ತರು, ವಾಸುದೇವ ಅವರ ಹಿತೈಷಿಗಳು, ಒಡನಾಡಿಗಳು ಉಪಸ್ಥಿತರಿದ್ದರು.
The Mass Master is the one who sowed the inspiration of loyalty in all of us.
.
Leave a comment