ಚಿಕ್ಕಮಗಳೂರು: ಅತಿ ಶೀಘ್ರದಲ್ಲಿ ಬೀದಿ ನಾಯಿಗಳಿಗೆ ಸಂತಾನ ಹರಣ ಶಸ್ತ್ರ ಚಿಕಿತ್ಸೆ ಮಾಡುವ ಮೂಲಕ ನಿಯಂತ್ರಣಕ್ಕೆ ಅಗತ್ಯ ಕ್ರಮ ವಹಿಸಬೇಕೆಂದು ಶಾಸಕ ಹೆಚ್.ಡಿ. ತಮ್ಮಯ್ಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕರೆಯಲಾಗಿದ್ದ ನಗರ ಮತ್ತು ತಾಲ್ಲೂಕಿನ ಗ್ರಾ.ಪಂ ವ್ಯಾಪ್ತಿಯಲ್ಲಿ ಬೀದಿನಾಯಿಗಳ ಉಪಟಳ ಹಾಗೂ ಬಿಡಾಡಿ ದನಗಳ ತೊಂದರೆಗಳ ಬಗ್ಗೆ ಸಾರ್ವಜನಿಕರಿಂದ ನಗರಸಭೆ ಮತ್ತು ತಾಲ್ಲೂಕು ಪಂಚಾಯಿತಿಗೆ ಹಲವಾರು ದೂರು ಬಂದ ಹಿನ್ನೆಲೆಯಲ್ಲಿ ಸಭೆ ನಡೆಸಿ ಕ್ರಮ ಕೈಗೊಳ್ಳಲು ಸೂಚಿಸಿದರು.
ಕಸಬಾ ಹೋಬಳಿ ಇಂದಾವರ ಗ್ರಾಮದ ಸರ್ವೆ ನಂ.೩೬ ರಲ್ಲಿ ೧೫ ಎಕರೆ ಜಾಗವನ್ನು ಪಶುಸಂಗೋಪನೆ ಇಲಾಖೆಗೆ ಮೀಸಲಿಟ್ಟಿದ್ದು, ಅದರಲ್ಲಿ ಎರಡು ಎಕರೆ ಜಾಗದಲ್ಲಿ ಬೀದಿನಾಯಿಗಳನ್ನು ಪಳಗಿಸಿ ಚಿಕಿತ್ಸೆ ನೀಡಲು ಸಂಬಂಧಿಸಿದ ಪಶುಸಂಗೋಪನೆ ಇಲಾಖೆ ಉಪನಿರ್ದೇಶಕರಿಗೆ ಸೂಚನೆ ನೀಡಲಾಗಿದೆ ಎಂದರು.
ಈ ಸಂಬಂಧ ಇನ್ನೊಂದು ತಿಂಗಳಲ್ಲಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ ಬೀದಿನಾಯಿಗಳನ್ನು ಹಿಡಿದು ಸಂತಾನ ಹರಣ ಶಸ್ತ್ರ ಚಿಕಿತ್ಸೆ ನೀಡಿ ಪುನಹಾ ಸ್ವಸ್ಥಾನಕ್ಕೆ ಬೀದಿನಾಯಿಗಳನ್ನು ತಂದು ಬಿಡಲಾಗುವುದು ಎಂದು ತಿಳಿಸಿದರು. ವರ್ಷದಲ್ಲಿ ಎರಡು ಬಾರಿ ಸಂತಾನ ಹರಣ ಶಸ್ತ್ರ ಚಿಕಿತ್ಸೆ ನೀಡಿದರೆ ಬೀದಿನಾಯಿಗಳ ಸಂತತಿ ಕಡಿಮೆಯಾಗುತ್ತದೆ ಎಂದು ಪಶುಸಂಗೋಪನೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆಂದು ಹೇಳಿದರು.
ಬಿಡಾಡಿ ದನಗಳನ್ನು ಸಾಕಿರುವವರಿಗೆ ನಗರಸಭೆಯಿಂದ ರಸ್ತೆಗೆ ಬಿಡದಂತೆ ಸೂಚನೆ ಪತ್ರ ನೀಡಿದ್ದು, ನಿರ್ಲಕ್ಷ್ಯ ವಹಿಸಿ ದನಗಳನ್ನು ಬೀದಿಗೆ ಬಿಟ್ಟರೆ ಬೇರೆಡೆಗೆ ಸಾಗಿಸಲು ಕ್ರಮವಹಿಸಲಾಗುವುದೆಂದು ಎಚ್ಚರಿಸಿದರು. ನಗರದ ಕಲ್ಯಾಣ ಮಂಟಪಗಳ ಮುಂಭಾಗದಲ್ಲಿ ವಾಹನಗಳನ್ನು ನಿಲುಗಡೆ ಮಾಡುತ್ತಿರುವುದರಿಂದ ಸಂಚಾರಕ್ಕೆ ತೊಂದರೆಯಾಗುತ್ತಿದ್ದು, ಈ ಬಗ್ಗೆ ಸಾರ್ವಜನಿಕರ ದೂರನ್ನು ಗಂಭೀರವಾಗಿ ಪರಿಗಣಿಸಿ ಕಲ್ಯಾಣ ಮಂಟಪದ ಮಾಲಿಕರು ಸೆಕ್ಯುರಿಟಿ ಗಾರ್ಡ್ ಒಬ್ಬರನ್ನು ನೇಮಕ ಮಾಡಿಕೊಂಡು ದೂರದಲ್ಲಿ ವಾಹನ ನಿಲುಗಡೆಗೆ ಮುಂದಾಗಬೇಕೆಂದು ಮನವಿ ಮಾಡಿದರು.
ನಗರಸಭಾಧ್ಯಕ್ಷೆ ಶೀಲಾ ದಿನೇಶ್ ಮಾತನಾಡಿ, ಬೀದಿನಾಯಿಗಳ ಉಪಟಳದಿಂದ ನಾಗರೀಕರಿಗೆ ತೊಂದರೆಯಾಗುತ್ತಿರುವುದನ್ನು ಮನಗಂಡು ಅವುಗಳ ನಿಯಂತ್ರಣಕ್ಕೆ ನಗರಸಭೆಯಿಂದ ಅಗತ್ಯ ಮುಂಜಾಗ್ರತಾ ಕ್ರಮ ವಹಿಸಲಾಗುವುದೆಂದು ಭರವಸೆ ನೀಡಿದರು.
ಪೌರಾಯುಕ್ತ ಬಿ.ಸಿ ಬಸವರಾಜ್ ಮಾತನಾಡಿ, ಕಳೆದೆರಡು ವರ್ಷಗಳಿಂದ ೩೫೦೦ ಬೀದಿನಾಯಿಗಳಿಗೆ ಸಂತಾನ ಹರಣ ಶಸ್ತ್ರಚಿಕಿತ್ಸೆ ನೀಡಲಾಗಿದೆ. ಪ್ರಸಕ್ತ ವರ್ಷ ೨೦೦೦ ಬೀದಿನಾಯಿಗಳಿಗೆ ಶಸ್ತ್ರಚಿಕಿತ್ಸೆ ನೀಡಲು ಗುರಿಹೊಂದಲಾಗಿದ್ದು, ಸಧ್ಯದಲ್ಲೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ ಕನಿಷ್ಟ ೬ ತಿಂಗಳಿಗೊಮ್ಮೆ ಶಸ್ತ್ರಚಿಕಿತ್ಸೆ ನೀಡಲಾಗುವುದೆಂದರು.
ಇದೂವರೆಗೆ ಬೀದಿನಾಯಿಗಳ ನಿಯಂತ್ರಣಕ್ಕೆ ಟೆಂಡರ್ ಕರೆದಿದ್ದು, ಟೆಂಡರ್‌ದಾರರು ಭಾಗವಹಿಸದ ಪರಿಣಾಮ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಆ.೧೧ ಕ್ಕೆ ಟೆಂಡರ್ ಪ್ರಕ್ರಿಯೆ ಅಂತಿಮಗೊಳಿಸಿ ಕಾರ್ಯಾದೇಶ ನೀಡಿ ಶಸ್ತ್ರಚಿಕಿತ್ಸೆಗೆ ಕ್ರಮವಹಿಸುವುದಾಗಿ ಭರವಸೆ ನೀಡಿದರು.
ಬಿಡಾಡಿ ದನಗಳ ನಿಯಂತ್ರಣಕ್ಕೆ ನಗರಸಭೆಯಿಂದ ಅಗತ್ಯ ಕ್ರಮ ಕೈಗೊಂಡಿದ್ದು, ಕಾಮಧೇನು ಗೋಶಾಲೆಗೆ ಟೆಂಡರ್ ನೀಡಲಾಗಿದೆ. ಬಿಡಾಡಿ ದನಗಳ ಸಾಕಾಣೆದಾರರಿಗೆ ನಗರಸಭೆಯಿಂದ ನೋಟೀಸ್ ನೀಡಿದ್ದು, ಸ್ಪಂದಿಸದಿದ್ದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಸಿ.ಎನ್. ಮೀನಾನಾಗರಾಜ್, ಜಿ.ಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ ಹೆಚ್.ಎಸ್. ಕೀರ್ತನ, ಪರಿಸರ ಅಭಿಯಂತರರಾದ ತೇಜಸ್ವಿನಿ, ಆರೋಗ್ಯ ನಿರೀಕ್ಷಕರಾದ ನಾಗಪ್ಪ, ರಂಗಪ್ಪ, ಇಂಜಿನಿಯರ್ ಲೋಕೇಶ್, ಪಶುಸಂಗೋಪನಾ ಇಲಾಖೆಯ ಉಪನಿರ್ದೇಶಕ ಮೋಹನ್ ಕುಮಾರ್, ಪ್ರಾಣಿ ದಯಾ ಸಂಘದ ನಳಿನಾ ಡಿಸಾ ಮತ್ತಿತರರು ಭಾಗವಹಿಸಿದ್ದರು.
Necessary measures to control stray dogs
Leave a comment