ಚಿಕ್ಕಮಗಳೂರು: ಜಿಲ್ಲೆಯಲ್ಲಿ ಮಾದಕ ವಸ್ತುಗಳ ವ್ಯಾಪಾರ-ವ್ಯವಹಾರ ಕಂಡು ಬಂದಲ್ಲಿ ಕಟ್ಟುನಿಟ್ಟಾದ ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ ಎಂದು ಶಾಸಕ ಹೆಚ್.ಡಿ.ತಮ್ಮಯ್ಯ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಚಿಕ್ಕಮಗಳೂರು, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ಬೆಂಗಳೂರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜ್ಞಾನ ಜ್ಯೋತಿ ಟಿ.ಎಂ.ಎಸ್. ವಿದ್ಯಾ ಸಂಸ್ಥೆ, ಚಿಕ್ಕಮಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಇಂದು ನಗರದ ಟಿ.ಎಂ.ಎಸ್. ರೋಟರಿ ಹಾಲ್‌ನಲ್ಲ್ಲಿ ಡಾ.ಶ್ರೀ ಮ.ನಿ.ಪ್ರ. ಡಾ.ಮಹಾಂತ ಶಿವಯೋಗಿಗಳ ಜನ್ಮ ದಿನದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ವ್ಯಸನಮುಕ್ತ ದಿನಾಚರಣೆ ಹಾಗೂ ವಿಚಾರ ಸಂಕಿರಣದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲಾ ಪಂಚಾಯಿತಿಯ ಕೆ.ಡಿ.ಪಿ. ಸಭೆಯಲ್ಲಿ ಈ ಬಗ್ಗೆ ಚರ್ಚೆಯಾಗಿದ್ದು, ಮಾದಕ ವಸ್ತು ಮಾರಾಟ ಮಾಡುವುದಕ್ಕೆ ಅವಕಾಶ ನೀಡಬಾರದು ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ತಾವು ಅಧಿಕಾರಿಗಳಿಗೆ ನಿರ್ದೇಶನ ನೀಡಿರುವುದಾಗಿ ತಿಳಿಸಿದ ಅವರು, ದೇಶದ ದಿಕ್ಕನ್ನೇ ಬದಲಿಸುವ ಶಕ್ತಿ ಇರುವ ಯುವಜನತೆ ವ್ಯಸನಗಳಿಗೆ ಬಲಿಯಾದರೆ, ಅವರ ಕುಟುಂಬ, ಸಮಾಜ ಅಷ್ಟೇ ಅಲ್ಲ, ಇಡೀ ದೇಶವೇ ದಿಕ್ಕು ತಪ್ಪುತ್ತದೆ ಎಂದು ಹೇಳಿದರು.
ಮಾದಕ ವ್ಯಸನಿಗಳಾದಲ್ಲಿ ಅವರ ವ್ಯಕ್ತಿಗತ ಜೀವನ ಮಾತ್ರವಲ್ಲ ಸಾಮಾಜಿಕ ಜೀವನದ ಮೇಲೂ ದುಷ್ಪರಿಣಾಮ ಬೀರುತ್ತದೆ. ಈ ಚಟಕ್ಕೆ ಬಿದ್ದವರು ಅಪರಾಧ ಕೃತ್ಯಗಳಲ್ಲಿ ತೊಡಗಿ ಸಮಾಜಕ್ಕೆ ಮಾರಕವಾಗುತ್ತಾರೆ. ಈ ಹಿನ್ನೆಲೆಯಲ್ಲಿ ಸಂಸ್ಕಾರವಂತ ದೇಶದಲ್ಲಿ ಜನಿಸಿರುವ ನಾವು ಕ್ಷಣಿಕ ಸಂತೋಷ ಕೊಡುವ ಈ ಚಟದಿಂದ ದೂರ ಉಳಿಯಬೇಕು ಎಂದು ತಿಳಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಂ.ಸಿ.ಶಿವಾನಂದಸ್ವಾಮಿ ಮಾತನಾಡಿ, ಎಲ್ಲರ ಬದುಕಿನಲ್ಲಿ ಯೋಗ್ಯತೆ ಇರುತ್ತದೆ. ಆದರೆ ಯೋಗ ಮಾತ್ರ ಕೂಡಿಬಂದಲ್ಲಿ ಮಾತ್ರ ಅವಕಾಶವನ್ನು ಪಡೆದುಕೊಳ್ಳಬಹುದು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಚೆನ್ನಾಗಿ ಓದಲು, ಉತ್ತಮ ಉದ್ಯೋಗ ಮಾಡಲು ಎಲ್ಲಾ ಯೋಗ್ಯತೆಗಳನ್ನು ಹೊಂದಿದ್ದರೂ ಪ್ರಯತ್ನ ಮಾಡುವುದು ಅಗತ್ಯ. ಈ ದಿಸೆಯಲ್ಲಿ ನಮ್ಮ ಬದುಕಿಗೆ ಕೆಟ್ಟದ್ದರತ್ತ ಕಣ್ಣು ಹಾಯಿಸಲೂ ಬಾರದು. ಅದರಲ್ಲೂ ಮಾದಕ ವಸ್ತುಗಳ ವ್ಯಾಮೋಹಕ್ಕೆ ಒಳಗಾಗಬಾರದು. ಅಂಥವುಗಳನ್ನು ಕೆಟ್ಟದ್ದು ಎಂದು ಹೇಳುವ ಧೈರ್ಯವೂ ನಮ್ಮಲ್ಲಿ ಇರಬೇಕು. ಆ ಮೂಲಕ ಈ ಪೀಳಿಗೆಯನ್ನು ಉತ್ತಮ ಹಾದಿಗೆ ಒಯ್ಯುವಂತಾಗಬೇಕು ಎಂದು ಆಶಯ ವ್ಯಕ್ತಪಡಿಸಿದರು.
ಡಾ.ಮಹಾಂತ ಶಿವಯೋಗಿಗಳ ಜೀವನ ಚರಿತ್ರೆ ಕುರಿತು ಉಪನ್ಯಾಸ ನೀಡಿದ ನಿವೃತ್ತ ಉಪನ್ಯಾಸಕ ಬಿ.ತಿಪ್ಪೇರುದ್ರಪ್ಪ ಮಾತನಾಡಿ, ತ್ರಿವಿಧ ದಾಸೋಹಗಳಾದ ಜ್ಞಾನಕ್ಕೆ ಅನ್ನಕ್ಕೆ, ಅರಿವೆಗೆ ಒತ್ತುಕೊಟ್ಟು ಅನಾದಿ ಕಾಲದಿಂದಲೂ ಶ್ರಮಿಸುತ್ತಿರುವ ಅನೇಕ ವಿರಕ್ತ ಮಠಗಳು ಕರ್ನಾಟಕದಾದ್ಯಂತ ಇವೆ. ಅದೇ ಸಾಲಿನಲ್ಲಿ ಚಿತ್ತರಗಿಯ ಮಹಾಂತ ಶಿವಯೋಗಿಗಳ ಮಠವೂ ಒಂದು. ಬಸವಾದಿ ಶರಣರ ಆಶಯಗಳನ್ನು ಪಾಲಿಸುವ ನಿಟ್ಟಿನಲ್ಲಿ ಸಂಕಲ್ಪ ಮತ್ತು ದೀಕ್ಷೆಯನ್ನು ಹೊತ್ತುಕೊಂಡು ಕಾರ್ಯೋನ್ಮುಖರಾಗಿರುವ ನಿಟ್ಟಿನಲ್ಲಿ ನಾವು ಮಹಾಂತ ಶಿವಯೋಗಿಗಳ ಜನ್ಮದಿನವನ್ನು ಆಚರಿಸುತ್ತಿದ್ದೇವೆ ಎಂದರು.
ಡಾ.ಮಹಾಂತ ಶಿವಯೋಗಿಗಳು ತಮ್ಮ ಸಮಾಜಮುಖಿ ಕಾರ್ಯಗಳಿಂದ ಮಹಾತ್ಮರಾದವರು. ವ್ಯಸನಮುಕ್ತ ವ್ಯಕ್ತಿ, ಸಮಾಜ, ಕುಟುಂಬ ಹಾಗೂ ವ್ಯಸನಮುಕ್ತ ದೇಶವನ್ನು ಕಟ್ಟುವ ಕಾಯಕದಲ್ಲಿ ಅವರು ಮುಂಚೂಣಿಯಲ್ಲಿದ್ದರು. ಅವರ ಜಯಂತಿಯನ್ನು ಆಚರಣೆ ಮಾಡಲು ಸರ್ಕಾರವೇ ಆದೇಶ ನೀಡಿರುವುದು ಇದೇ ಕಾರಣಕ್ಕೆ. ಅವರು ತಮ್ಮ ಕಿರಿಯ ವಯಸ್ಸಿನಲ್ಲೇ ಆ ಮಠಕ್ಕೆ ಕಿರಿಯ ಸ್ವಾಮೀಜಿಯಾಗಿ ಪಟ್ಟಾಭಿಷಿಕ್ತರಾಗುತ್ತಾರೆ. ಕಾಶಿಯಲ್ಲಿ ಸಕಲ ವಿದ್ಯಾ ಪಾರಂಗತರಾಗಿದ್ದರು. ಉತ್ತರ ಕರ್ನಾಟಕದಲ್ಲಿ ಬರಗಾಲ ಬಂದಾಗ ಗೋಶಾಲೆಗಳು, ಗಂಜಿ ಕೇಂದ್ರಗಳು, ಮೇವಿನ ಕೇಂದ್ರಗಳನ್ನು ತೆರೆಯುವ ಮೂಲಕ ಸಮಾಜಮುಖಿಯಾಗಿ ಕಾರ್ಯ ನಿರ್ವಹಿಸಿದ್ದರು. ಅವರು ಧರ್ಮ, ಜಾತಿ, ಭಾಷೆ, ಪಂಥ, ದೇಶ ಎಲ್ಲವನ್ನೂ ಮೀರಿದ ಶಿವಯೋಗಿಗಳು ಎಂದು ಬಣ್ಣಿಸಿದರು.
ಮದ್ಯಪಾನ ಮತ್ತು ಮಾದಕ ವಸ್ತುಗಳ ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳ ಕುರಿತು ಉಪನ್ಯಾಸ ನೀಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮಾನಸಿಕ ಆರೋಗ್ಯ ತಜ್ಞ ಡಾ.ವಿನಯ್, ಯುವಜನತೆ ಮೊದಲಿಗೆ ಆಸೆ, ಕುತೂಹಲ ಹಾಗೂ ಒತ್ತಡಗಳಿಗೆ ಬಿದ್ದು ಮಾದಕ ವಸ್ತುಗಳ ಮೋಹಕ್ಕೆ ಒಳಗಾಗಿ ಮುಂದೆ ಅದು ಖುಷಿಗೂ, ಬೇಸರಕ್ಕೂ ಬಳಸುವ ಮೂಲಕ ವ್ಯಸನಿಗಳಾಗುತ್ತಾರೆ. ಕ್ಷಣಿಕವಾಗಿ ಮಿದುಳನ್ನು ಉದ್ದೀಪನಗೊಳಿಸುವ ಈ ಚಟಗಳಿಗೆ ದಾಸರಾದರೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿ ಇಡೀ ಜೀವನವನ್ನು ಹಾಳು ಮಾಡಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಮದ್ಯ, ತಂಬಾಕು ವಸ್ತುಗಳು, ಗಾಂಜಾ, ಕೊಕೇನ್, ಹೆರಾಯಿನ್ ಇವು ಮಾದಕ ವಸ್ತುಗಳಾಗಿದ್ದು, ಮಿದುಳು ಚುರುಕಾಗುತ್ತದೆ ಎನ್ನುವ ಕಾರಣಕ್ಕೆ ಯುವಜನರು ಬೇಗ ಅವುಗಳ ದಾಸರಾಗಿಬಿಡುತ್ತಾರೆ. ಉದ್ದೀಪನಗೊಳಿಸುವ ಈ ಚಟಗಳಿಗೆ ದಾಸರಾದರೆ ಮತ್ತೆ ಅವುಗಳಿಂದ ಹೊರ ಬರುವುದು ಕಷ್ಟ. ಚಟಕ್ಕೆ ಒಳಗಾದವರು ಆರೋಗ್ಯ ಇಲಾಖೆಯ ಸಹಾಯವಾಣಿ ಮೂಲಕ ನೆರವು ಪಡೆಯಬಹುದು. ಅಂಥವರು ಒಮ್ಮೆ ಆಸ್ಪತ್ರೆಗೆ ಭೇಟಿ ನೀಡಿ ಈ ಸಂಬಂಧಿತ ರೋಗಿಗಳ ಸ್ಥಿತಿಯನ್ನು ಅವಲೋಕಿಸಬೇಕು ಎಂದು ತಿಳಿಸಿದರು.
ಟೌನ್ ಮಹಿಳಾ ಸಮಾಜದ ಅಧ್ಯಕ್ಷೆ ನೇತ್ರಾ ವೆಂಕಟೇಶ್ ಮಾತನಾಡಿ, ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಣ ಮಾತ್ರವಲ್ಲ, ಸಂಸ್ಕಾರವನ್ನು ಬೆಳೆಸಿಕೊಳ್ಳುವುದು ಅಗತ್ಯ. ಅದರಿಂದ ಮಾತ್ರ ದೇಶಕ್ಕೆ ವಿದ್ಯಾರ್ಥಿಗಳು ಕೊಡುಗೆ ನೀಡಲು ಸಾಧ್ಯ ಎಂದರು.
ಟೌನ್ ಮಹಿಳಾ ಸಮಾಜದ ಕಾರ್ಯದರ್ಶಿ ಶುಭದಾ, ಜಿಲ್ಲಾ ಕೇಂದ್ರ ಗ್ರಂಥಾಲಯಾಧಿಕಾರಿ ಉಮೇಶ್, ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಜೆ.ಮಂಜೇಗೌಡ ಉಪಸ್ಥಿತರಿದ್ದರು. ಜ್ಞಾನಜ್ಯೋತಿ ಟಿ.ಎಂ.ಎಸ್.ಪದವಿ ಕಾಲೇಜಿನ ಪ್ರಾಂಶುಪಾಲ ಇಂದ್ರೇಶ್ ಸ್ವಾಗತಿಸಿದರು. ಜಿಲ್ಲಾ ಕೇಂದ್ರ ಗ್ರಂಥಾಲಯದ ಸಹಾಯಕ ಗ್ರಂಥಪಾಲಕ ಹೆಚ್.ಬಿ.ಮಹೇಶಪ್ಪ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಇದೇ ಸಂದರ್ಭದಲ್ಲಿ ಅಂಬಳೆಯ ರೇಣುಕಾಮಾತೆ ತೊಗಲುಗೊಂಬೆ ಕಲಾ ಸಂಘದ ವತಿಯಿಂದ ಮಾದಕ ವಸ್ತುಗಳ ದುಷ್ಪರಿಣಾಮದ ಕುರಿತು ತೊಗಲು-ಗೊಂಬೆಯಾಟ ಪ್ರದರ್ಶಿಸಲಾಯಿತು.
Drug Free Day – Symposium
Leave a comment