ಚಿಕ್ಕಮಗಳೂರು: ಶಿವಮೊಗ್ಗದ ಸಹ್ಯಾದ್ರಿ ರಂಗಭೂಮಿ ಅರ್ಪಿಸುವ ಸಮಾಜಕ್ಕೆ ಒಳ್ಳೆಯ ಸಂದೇಶ ಸಾರುವ ‘ಲಕ್ಷ್ಮಣ್ ತುಕಾರಾಂ ಗೋಲೆ’ ಎಂಬ ವಿಶೇಷ ಸಾಮಾಜಿಕ ನಾಟಕ ಪ್ರದರ್ಶನ ಆ.೩ ರಂದು ಭಾನುವಾರ ನಗರದ ಕುವೆಂಪು ಕಲಾಮಂದಿರದಲ್ಲಿ ಸಂಜೆ ೬ ಗಂಟೆಗೆ ಏರ್ಪಡಿಸಲಾಗಿದೆ.
ಇಂದು ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಆಶಾಕಿರಣ ಅಂಧಮಕ್ಕಳ ಪಾಠಶಾಲೆಯ ಅಧ್ಯಕ್ಷರಾದ ಡಾ. ಜೆ.ಪಿ. ಕೃಷ್ಣೇಗೌಡ ಅವರು ಬಸವತತ್ವ ಪೀಠ, ಕಲಾ ಸೇವಾ ಸಂಘ, ಆಶಾಕಿರಣ ಚಾರಿಟಬಲ್ ಟ್ರಸ್ಟ್, ಆದಿಚುಂಚನಗಿರಿ ವಿಶ್ವ ವಿದ್ಯಾನಿಲಯ, ಆಶ್ರಯ ಫೌಂಡೇಶನ್, ಕಲ್ಕಟ್ಟೆ ಪುಸ್ತಕದ ಮನೆ, ಜಿ.ಸಿ ಅಂತರಾಷ್ಟ್ರೀಯ ಸಂಸ್ಥೆ, ಪೂರ್ವಿ ಸುಗಮ ಸಂಗೀತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರುಗಳ ಸಂಯುಕ್ತಾಶ್ರಯದಲ್ಲಿ ಈ ನಾಟಕ ಪ್ರದರ್ಶನವನ್ನು ಆಯೋಜಿಸಲಾಗಿದೆ ಎಂದರು.
ಈ ನಾಟಕ ಪ್ರದರ್ಶನದ ಉದ್ಘಾಟನಾ ಸಮಾರಂಭದ ದಿವ್ಯ ಸಾನಿಧ್ಯವನ್ನು ಬಸವಮಂದಿರದ ಡಾ. ಬಸವ ಮರುಳುಸಿದ್ದ ಸ್ವಾಮೀಜಿ ವಹಿಸಲಿದ್ದು, ಅಧ್ಯಕ್ಷತೆಯನ್ನು ಕಲಾ ಸೇವಾ ಸಂಘದ ಅಧ್ಯಕ್ಷ ಕೆ. ಮೋಹನ್ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ, ಡಾ. ಮಂಜುಳ ಉಲ್ಲಳ್ಳಿ, ಡಾ. ಸಿ.ಕೆ. ಸುಬ್ರಾಯ, ಡಾ. ರಮೇಶ್, ಕಾಂತೇಶ್ ಕದರ ಮಂಡಲಗಿ, ಲಯನ್ ಕುಮಾರ್, ಡಾ. ವರ್ಷ ಅಭಿಷೇಕ್, ನಾಗರಾಜ್‌ರಾವ್ ಕಲ್ಕಟ್ಟೆ, ಪ್ರದೀಪ್ ಸಿ.ಬಿ. ಎಂ.ಎಸ್ ಸುಧೀರ್ ಭಾಗವಹಿಸಲಿದ್ದಾರೆಂದು ಹೇಳಿದರು.
ಈ ನಾಟಕವು ಗಾಂಧಿವಾದಿ ಲಕ್ಷ್ಮಣ್ ತುಕಾರಾಂ ಗೋಲೆ ಅವರ ಜೀವನಾಧಾರಿತ ಕಥೆಯನ್ನೊಳಗೊಂಡಿದ್ದು, ವಿಶೇಷವಾಗಿ ಸ್ವತಹಾ ಗೋಲೆಯವರೇ ಉಪಸ್ಥಿತರಿದ್ದು ನಾಟಕವನ್ನು ವೀಕ್ಷಿಸಲಿದ್ದಾರೆಂದರು. ಅದೇ ದಿನ ಮಧ್ಯಾಹ್ನ ೧೨ ಗಂಟೆಗೆ ಇಲ್ಲಿನ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಗಳಿಗೆ ಇದೇ ನಾಟಕವನ್ನು ಪ್ರದರ್ಶನ ಮಾಡಲು ನಿರ್ಧರಿಸಲಾಗಿದೆ ಎಂದು ಹೇಳಿದರು.
ಯುವತಿಯೋರ್ವಳನ್ನು ರೌಡಿಯಿಂದ ರಕ್ಷಿಸಲು ಹೋದ ಸಂದರ್ಭದಲ್ಲಿ ಆತನ ಕಿವಿಯನ್ನು ಕತ್ತರಿಸಿದ ಘಟನೆಯಿಂದ ಜೈಲು ಸೇರಿ ಮುಂದೆ ಪಾತಕ ಲೋಕದ ವಿವಿಧ ಮಜಲುಗಳನ್ನು ಪರಿಚಯ ಮಾಡಿಕೊಂಡು ರೇಜರ್ ಲಕನ್ ಎಂದೇ ಕುಖ್ಯಾತಿ ಪಡೆದು ೭ ವರ್ಷಗಳ ಜೈಲು ಶಿಕ್ಷೆಗೊಳಗಾಗಿದ್ದ ಇವರು ಅಲ್ಲಿ ಗಾಂಧೀಜಿಯವರ ಆತ್ಮಚರಿತ್ರೆಯನ್ನು ಓದಿ ಮನಃಪರಿವರ್ತನೆಗೊಂಡು ಸನ್ನಡತೆಯ ಹಿನ್ನೆಲೆಯಲ್ಲಿ ನಾಲ್ಕು ವರ್ಷಗಳಿಗೆ ಬಿಡುಗಡೆಯಾದ ಲಕ್ಷ್ಮಣ್ ತುಕಾರಾಂ ಗೋಲೆ, ಸಮಾಜಸೇವೆ, ಯೋಗ, ಧ್ಯಾನ, ಕೈದಿಗಳ ಮನಃಪರಿವರ್ತನೆಯಲ್ಲಿ ತೊಡಗಿದ್ದಾರೆಂದು ತಿಳಿಸಿದರು.
೨೦೧೫ ರ ಜಿಂದಗಿ ಲೈಫ್ ರಾಷ್ಟ್ರೀಯ ಪ್ರಶಸ್ತಿಗೂ ಭಾಜನರಾದ ಇವರು, ನಾಟಕ ಪ್ರದರ್ಶನದಲ್ಲಿ ಪಾಲ್ಗೊಳ್ಳುತ್ತಿರುವುದು ವಿಶೇಷವಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕಲಾ ಸೇವಾ ಸಂಘದ ಅಧ್ಯಕ್ಷ ಕೆ. ಮೋಹನ್, ಲಯನ್ಸ್ ಅಧ್ಯಕ್ಷ ಕುಮಾರ್ ಸಿ.ಎನ್, ಪ್ರಧಾನ ಕಾರ್ಯದರ್ಶಿ ಗೋಪಿಕೃಷ್ಣ, ಲಯನ್ ಜಿ.ರಮೇಶ್, ಎಂ.ಎಸ್. ಸುಧೀರ್ ಉಪಸ್ಥಿತರಿದ್ದರು.
Lakshman Tukaram Gole play performance on August 3rd
Leave a comment