ಚಿಕ್ಕಮಗಳೂರು: ನಗರದ ಜ್ಯೋತಿ ನಗರ ಬಡಾವಣೆಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು ಎಂದು ನಗರಸಭೆ ಅಧ್ಯಕ್ಷೆ ಶೀಲಾ ದಿನೇಶ್ ತಿಳಿಸಿದರು.
ಭಾನುವಾರ ನಗರದ ಜ್ಯೋತಿ ನಗರ ಬಡಾವಣೆಗೆ ಭೇಟಿ ನೀಡಿ ಇಲ್ಲಿನ ರಸ್ತೆ, ಚರಂಡಿ, ಉದ್ಯಾನವನ, ಖಾಲಿ ನಿವೇಶನಗಳ ಅವ್ಯವಸ್ಥೆಯನ್ನು ಪರಿಶೀಲಿಸಿ ನಂತರ ಬಡಾವಣೆಯಲ್ಲಿನ ಗಣಪತಿ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿ ದರು.
ಜ್ಯೋತಿ ನಗರ ಬಡಾವಣೆಯ ರಸ್ತೆಗಳು ಹೊಂಡಗುಂಡಿಗಳಿಂದ ಕೂಡಿದೆ. ಚರಂಡಿ ಹಾಗೂ ಉದ್ಯಾನವನಗಳು ಅವ್ಯವಸ್ಥೆ ಯಿಂದ ಕೂಡಿದ್ದು, ಖುದ್ದು ಪರಿಶೀಲಿಸಿದ್ದೇನೆ. ರಸ್ತೆ, ಚರಂಡಿ ಹಾಗೂ ಉದ್ಯಾನವನಗಳ ಅಭಿವೃದ್ಧಿಗೆ ಶ್ರಮಿಸುವುದಾಗಿ ಬಡಾ ವಣೆ ನಿವಾಸಿಗಳಿಗೆ ಭರವಸೆ ನೀಡಿದರು.
ನಗರಸಭೆ ಪೌರಾಯುಕ್ತ ಬಿ.ಸಿ.ಬಸವರಾಜ್ ಮಾತನಾಡಿ, ಬಡಾವಣೆಯ ರಸ್ತೆ ಹಾಗೂ ಚರಂಡಿಯನ್ನು ನಗರಸಭೆಯಿಂದ ಅಭಿವೃದ್ಧಿಪಡಿಸಲಾಗುವುದು. ರಸ್ತೆ ತಿರುವಿನಲ್ಲಿ ವಿದ್ಯುತ್ ಕಂಬವಿದ್ದು ವಾಹನ ಸವಾರರಿಗೆ ತೊಂದರೆಯಾಗುತ್ತಿದೆ ಎಂದು ಇಲ್ಲಿನ ನಿವಾಸಿಗಳು ಗಮನಕ್ಕೆ ತಂದಿದ್ದು ವಿದ್ಯುತ್ ಕಂಬ ಸ್ಥಳಾಂತರ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಬಡಾವಣೆಯಲ್ಲಿ ಉದ್ಯಾನವನಗಳ ಜಾಗ ಒತ್ತುವರಿಯಾಗಿದೆ ಎಂಬದು ತಿಳಿದು ಬಂದಿದ್ದು, ಉದ್ಯಾನವನಗಳ ಒತ್ತುವರಿಯನ್ನು ತೆರವುಗೊಳಿಸಲಾಗುವುದು ಹಾಗೂ ವಿಶಾಲ್ ಮಾರ್ಟ್ ಪಕ್ಕದಲ್ಲಿನ ರಸ್ತೆ ಒತ್ತುವರಿಯಾಗಿದೆ. ಕಿರಿದಾದ ರಸ್ತೆಯಿಂದ ವಾಹನ ದಟ್ಟಣೆ ಉಂಟಾಗುತ್ತಿದ್ದು, ಪ್ರತಿನಿತ್ಯ ಅಪಘಾತಗಳು ಉಂಟಾಗುತ್ತಿವೆ. ಈ ಹಿನ್ನಲೆಯಲ್ಲಿ ರಸ್ತೆ ಒತ್ತುವರಿಯನ್ನು ತೆರವುಗೊಳಿಸಿ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗುವುದು ಎಂದು ತಿಳಿಸಿದರು.
ಬಡಾವಣೆಯ ನಿವಾಸಿ ರೇಖಾ ಹುಲಿಯಪ್ಪಗೌಡ ಮಾತನಾಡಿ, ಬಡಾವಣೆಯ ಸಾರಥಿ ಕಾಫಿ ಕ್ಯೂರಿಂಗ್ ಎದುರಿನ ರಸ್ತೆ ಹೊಂಡಗುಂಡಿಗಳಿಂದ ಕೂಡಿದ್ದು ಸಂಚಾರಿಸುವುದು ಕಷ್ಟವಾಗಿದೆ. ಲಕ್ಷ್ಮೀಶ (ಪಾಪಣ್ಣ) ಎಂಬುವರ ಮನೆಯ ಮುಂಭಾಗದಲ್ಲಿ ಗಣಪತಿ ದೇವಸ್ಥಾನ ತಿರುಗುವ ರಸ್ತೆಯಲ್ಲಿ ವಿದ್ಯುತ್ ಕಂಬವಿದ್ದು ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಬಡಾವಣೆಯಲ್ಲಿ ಉದ್ಯಾನವನಕ್ಕೆ ಮೀಸಲಿಟ್ಟ ಜಾಗವನ್ನು ಗುರುತಿಸಿ ಒತ್ತುವರಿಯಾಗದಂತೆ ಸಂರಕ್ಷಿಸುವ ಜತೆಗೆ ಬಡಾವಣೆಯ ಅಭಿವೃದ್ಧಿ ಹಾಗೂ ಮೂಲಭೂತ ಸೌಲಭ್ಯವನ್ನು ಕಲ್ಪಿಸುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ಗುರು ಮಲ್ಲಪ್ಪ, ಸತೀಶ್ ಸೇರಿದಂತೆ ಬಡಾವಣೆಯ ನಿವಾಸಿಗಳು ಇದ್ದರು.
Jyothi Nagar residents appeal for basic facilities
Leave a comment