ಆಲ್ದೂರು: ‘ಧರ್ಮಸ್ಥಳ ಗ್ರಾಮದಲ್ಲಿ ನಡೆದಿದೆ ಎನ್ನಲಾದ ಅಸಹಜ ಸಾವು ಪ್ರಕರಣದ ತನಿಖೆಯನ್ನು ಎಸ್‌ಐಟಿಗೆ ವಹಿಸಿರುವುದು ರಾಜ್ಯ ಸರ್ಕಾರದ ಉತ್ತಮ ನಿರ್ಧಾರ’ ಎಂದು ಹೋರಾಟ ಗಾರ ಜಗದೀಶ್ ಚಕ್ರವರ್ತಿ ಹೇಳಿದರು.
ಭೀಮ್ ಆರ್ಮಿ ಜಿಲ್ಲಾ ಘಟಕದ ವತಿಯಿಂದ ಪಟ್ಟಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ಸೌಜನ್ಯಾ ನ್ಯಾಯ ಪರ ಪ್ರತಿಭಟನೆ’ಯಲ್ಲಿ ಅವರು ಮಾತನಾಡಿದರು.
‘ನಾವು ಯಾವುದೇ ಧರ್ಮದ ವಿರೋಧಿಗಳಲ್ಲ. ಅನ್ಯಾಯವನ್ನು ಮಾತ್ರ ವಿರೋಧಿಸುವವರು. ಯಾವ ಧರ್ಮವೂ ನೀಚ ಕೃತ್ಯಗಳನ್ನು ಪ್ರಬೋಧಿಸಿಲ್ಲ. ಹಿಂದೂ ಹೆಣ್ಣು ಮಕ್ಕಳ ಹತ್ಯೆ ಖಂಡಿಸಿ ರಾಜಕೀಯ ಮುಖಂಡರು, ಧಾರ್ಮಿಕ ಮುಖಂಡರು ಧ್ವನಿ ಎತ್ತದೆ ಇರುವುದು ಸರಿಯಲ್ಲ. ಅಸಹಜ ಸಾವು ಪ್ರಕರಣದ ಸಾಕ್ಷಿ ದೂರುದಾರನಿಗೆ ಸರ್ಕಾರ ಸೂಕ್ತ ಭದ್ರತೆ ಒದಗಿಸಬೇಕು’ ಎಂದು ಒತ್ತಾಯಿಸಿದರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಭೀಮ ಆರ್ಮಿ ಜಿಲ್ಲಾ ಘಟಕದ ಅಧ್ಯಕ್ಷ ಗಿರೀಶ್ ದೊಡ್ಡ ಮಾಗರವಳ್ಳಿ, ಸೌಜನ್ಯಾ ಪ್ರಕರಣದ ನಿಷ್ಪಕ್ಷಪಾತ ತನಿಖೆಯಾಗಲಿ. ತನಿಖೆ ನಡೆಸುತ್ತಿರುವ ಕೆಲ ಅಧಿಕಾರಿಗಳು ತನಿಖೆಯಿಂದ ಹಿಂದೆ ಸರಿಯುತ್ತಿದ್ದು, ಅಂಥ ಅಧಿಕಾರಿಗಳನ್ನು ಹುದ್ದೆಯಿಂದ ವಜಾಗೊಳಿಸಬೇಕು’ ಎಂದು ಆಗ್ರಹಿಸಿದರು.
ಭೀಮ್ ಆರ್ಮಿ ಜಿಲ್ಲಾ ಘಟಕದ ಉಪಾಧ್ಯಕ್ಷ ಸತೀಶ್ ರಾವಣ ಕೂದುವಳ್ಳಿ, ಕಾರ್ಯದರ್ಶಿ ಗಣೇಶ್, ಮೂಡಿಗೆರೆ ತಾಲ್ಲೂಕು ಘಟಕದ ಅಧ್ಯಕ್ಷ ಹರೀಶ್ ಕೆಲ್ಲೂರು, ಆಲ್ದೂರು ಹೋಬಳಿ ಘಟಕದ ಅಧ್ಯಕ್ಷ ಸುರೇಶ್, ಪ್ರಗತಿಪರ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.
Protest demanding a thorough investigation into the Dharmasthala unnatural death case
Leave a comment