ಚಿಕ್ಕಮಗಳೂರು: ಶಾಲಾ ಕಾಲೇಜುಗಳಲ್ಲಿ ಮಾದಕವಸ್ತು ವಿರೋಧಿ ಜಾಗೃತಿ ಸಮಿತಿಗಳನ್ನು ಕಡ್ಡಾಯವಾಗಿ ರಚಿಸುವ ಮೂಲಕ ಮಾದಕ ವಸ್ತು ವ್ಯಸನದ ಅರಿವು ಮೂಡಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಮ್ ಅಮಟೆ ಸೂಚಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಪೊಲೀಸ್ ಇಲಾಖೆ, ಕಾನೂನು ಸೇವಾ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ಹಕ್ಕುಗಳ ರಕ್ಷಣಾ ಘಟಕ ಮತ್ತಿತರ ಇಲಾಖೆಗಳ ಆಶ್ರಯದಲ್ಲಿ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗಳ ವಸತಿ ಶಾಲೆಗಳು ಹಾಗೂ ಜಿಲ್ಲಾ ವ್ಯಾಪ್ತಿಯ ಎಲ್ಲಾ ವಿದ್ಯಾರ್ಥಿ ನಿಲಯಗಳು ಮತ್ತು ಕ್ರೈಸ್ಟ್ ಅಧೀನದ ವಸತಿ ಶಾಲೆಗಳ ಪ್ರಾಂಶುಪಾಲರು ಮತ್ತು ವಾರ್ಡನ್‌ಗಳಿಗೆ ಮಾದಕ ವಸ್ತು ವ್ಯಸನದ ದುಷ್ಪರಿಣಾಮಗಳು ಮತ್ತು ಪೋಕ್ಸೋ ಕಾಯ್ದೆ ಕುರಿತು ನಗರದ ಜಿಲ್ಲಾ ಪಂಚಾಯಿತಿಯ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ಇಂದು ಆಯೋಜಿಸಿದ್ದ ಒಂದು ದಿನದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಹಿಂದೆ ರ್‍ಯಾಗಿಂಗ್ ವಿರೋಧಿ ಸಮಿತಿಗಳನ್ನು ರಚಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗಿತ್ತು. ಈ ಬೆಳವಣಿಗೆ ಬಳಿಕ ರ್‍ಯಾಗಿಂಗ್ ಕಾಯ್ದೆ ರಚಿಸಿದ ಬಳಿಕ ಆ ಪಿಡುಗು ಸಂಪೂರ್ಣ ಕಡಿಮೆಯಾಗಿದೆ. ಅದೇ ರೀತಿ ಗೃಹ ಸಚಿವರ ನಿರ್ದೇಶನದ ಮೇರೆಗೆ ಮಾದಕವಸ್ತು ವಿರೋಧಿ ಜಾಗೃತಿ ಸಮಿತಿ ರಚಿಸಿ, ಆ ಮೂಲಕ ವಿದ್ಯಾರ್ಥಿಗಳಲ್ಲಿ ಮಾದಕ ವಸ್ತು ವ್ಯಸನದ ಬಗ್ಗೆ ಅರಿವು ಮೂಡಿಸಿ ಅವರನ್ನು ಸಂವೇದನಾ ಶೀಲರನ್ನಾಗಿ ಮಾಡಬೇಕು ಎನ್ನುವ ಉದ್ದೇಶ ಹೊಂದಲಾಗಿದೆ. ಈಗಾಗಲೇ ನಮ್ಮ ಪಾಲುದಾರ ಇಲಾಖೆಗಳಿಗೆ ಈ ಬಗ್ಗೆ ನಿರ್ದೇಶನ ನೀಡಲಾಗಿದೆ. ಎಂದು ತಿಳಿಸಿದರು.
ಆ ಸಮಿತಿಯ ಸ್ವರೂಪದ ಬಗ್ಗೆ ಈಗಾಗಲೇ ತಮ್ಮ ಸಂಸ್ಥೆಗಳಿಗೆ ಕಳುಹಿಸಿರುವ ಪತ್ರದಲ್ಲಿ ಮಾಹಿತಿ ನೀಡಲಾಗಿದೆ. ಅಲ್ಲಿನ ಪ್ರಾಚಾರ್ಯರು ಮುಖ್ಯಸ್ಥರಾಗಿರುತ್ತಾರೆ. ಇಬ್ಬರು ಬೋಧಕ ಸಿಬ್ಬಂದಿ ಸದಸ್ಯರಾಗಿರುತ್ತಾರೆ. ಇಬ್ಬರು ಹಿರಿಯ ವಿದ್ಯಾರ್ಥಿಗಳು ಇರುತ್ತಾರೆ. ಆ ಭಾಗದ ಬೀಟ್ ಪೊಲೀಸ್ ಸಿಬ್ಬಂದಿ, ಆ ವಿಭಾಗದ ಕಾನೂನು ಸುವ್ಯವಸ್ಥೆ ವಿಭಾಗದ ಸಬ್ ಇನ್ಸ್‌ಪೆಕ್ಟರ್ ಸಮಿತಿಯಲ್ಲಿರುತ್ತಾರೆ. ಈ ಸಮಿತಿ ಯಾವ ರೀತಿ ಕಾರ್ಯ ನಿರ್ವಹಿಸಬೇಕೆಂಬ ಬಗ್ಗೆ ಅನಂತರದಲ್ಲಿ ಮಾಹಿತಿ ನೀಡಲಾಗುವುದು ಎಂದು ಹೇಳಿದರು.
ಮಕ್ಕಳು ಈ ರೀತಿಯ ವ್ಯಸನಕ್ಕೆ ಒಳಗಾಗದೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂಬ ಹಿನ್ನೆಲೆಯಲ್ಲಿ ಶಿಕ್ಷಣ ಸಂಸ್ಥೆಗಳನ್ನು ಗುರಿಯಾಗಿಸಿ ಜಾಗೃತಿ ಮೂಡಿಸಿದಲ್ಲಿ ಮುಂದೆ ವಿದ್ಯಾರ್ಥಿಗಳು ಸಮಾಜದ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಬಹುದು ಎಂಬ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಹಾಗೆಯೇ ಇಂತಹ ಸಾಮಾಜಿಕ ಪಿಡುಗುಗಳು ಶಿಕ್ಷಣ ಸಂಸ್ಥೆಗಳಿಂದಲೇ ಹುಟ್ಟಿಕೊಳ್ಳುವಂತಾದರೆ ಅದು ಸಮಾಜಕ್ಕೆ ಕೆಟ್ಟ ಸಂದೇಶ ರವಾನೆಯಾಗುತ್ತದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ದುರ್ವ್ಯಸನಗಳಿಗೆ ಒಳಗಾಗಬಾರದು. ಈ ಹಿನ್ನೆಲೆಯಲ್ಲಿ ಕಾರ್ಯ ನಿರ್ವಹಿಸುವುದು ಎಲ್ಲರ ಕರ್ತವ್ಯವಾಗಿದೆ ಎಂದು ತಿಳಿಸಿದರು.
ಶಾಲಾ ಕಾಲೇಜುಗಳು ಹಾಗೂ ಹಾಸ್ಟೆಲ್‌ಗಳನ್ನು ಮಾದಕ ವಸ್ತುಗಳು ಮಾತ್ರವಲ್ಲದೆ ಮದ್ಯ ಹಾಗೂ ತಂಬಾಕು ಉತ್ಪನ್ನಗಳಿಂದ ಮುಕ್ತವಾಗಿಸಬೇಕು. ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ಅವುಗಳ ಬಳಕೆಗೆ ಆಗಲಿ, ಮಾರಾಟಕ್ಕೆ ಆಗಲಿ ಅವಕಾಶ ನೀಡಬಾರದು. ಅಂಥ ಬೆಳವಣಿಗೆಗೇನಾದರೂ ಕಂಡು ಬಂದರೆ ಪೊಲೀಸ್ ಇಲಾಖೆಗೆ ಮಾಹಿತಿ ನೀಡಬೇಕು ಎಂದು ಅವರು ಮಾಹಿತಿ ನೀಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ವಿ.ಹನುಮಂತಪ್ಪ ಮಾತನಾಡಿ, ಮಕ್ಕಳ ಹಕ್ಕುಗಳ ಸಂರಕ್ಷಣೆಗೆ ಸಂಬಂಧಿಸಿದಂತೆ ೧೯೯೨ ರಲ್ಲಿ ಅಂತಾರಾಷ್ಟ್ರೀಯ ಸಮಾವೇಶದಲ್ಲಿ ಕೈಗೊಂಡ ತೀರ್ಮಾನಕ್ಕೆ ಭಾರತ ಸಹಿ ಹಾಕಿದ್ದು, ಮಕ್ಕಳಿಗೆ ಸಂಬಂಧಿಸಿದ ಕಾಯ್ದೆಗಳನ್ನು ಜಾರಿಗೊಳಿಸುವುದು. ೨೦೧೨ರಲ್ಲಿ ಪೋಕ್ಸೋ ಕಾಯ್ದೆಯನ್ನು ಜಾರಿಗೊಳಿಸಲಾಯಿತು ಎಂದು ತಿಳಿಸಿದರು.
೧೮ ವರ್ಷದೊಳಗಿನ ಹೆಣ್ಣು ಹಾಗೂ ಗಂಡು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆದರೆ ಪೋಕ್ಸೋ ಕಾಯ್ದೆಯ ವ್ಯಾಪ್ತಿಗೆ ಬರುತ್ತದೆ. ೨೦೧೯ರಲ್ಲಿ ಕಾಯ್ದೆ ತಿದ್ದುಪಡಿಯಾದ ಬಳಿಕ ಕಠಿಣ ಕಾನೂನು ಜಾರಿಗೆ ಬಂದಿತು. ೧೬ ವರ್ಷದೊಳಗಿನ ಮಕ್ಕಳ ಮೇಲೆ ಅದರಲ್ಲೂ ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದಲ್ಲಿ ಅಷ್ಟಕ್ಕೂ ಕೃತ್ಯ ಎಸಗಿದವರು ಸಂಬಂಧಿಕರಾಗಿದ್ದರೆ ಮರಣ ದಂಡನೆ ವಿಧಿಸಲು ಕೂಡ ಈ ಕಾಯ್ದೆಯಲ್ಲಿ ಅವಕಾಶವಿದೆ ಎಂದು ಮಾಹಿತಿ ನೀಡಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಚ್.ಎಸ್.ಕೀರ್ತನಾ ಅಧ್ಯಕ್ಷತೆ ವಹಿಸಿದ್ದ ಈ ಕಾರ್ಯಕ್ರಮದಲ್ಲಿ ವಕೀಲರ ಸಂಘದ ಅಧ್ಯಕ್ಷ ಸುಜೆಂದ್ರ ಮಾತನಾಡಿದರು. ಬಾಲ ನ್ಯಾಯ ಮಂಡಳಿ ಸದಸ್ಯ ಚಂದ್ರಶೇಖರ್ ಉಪನ್ಯಾಸ ನೀಡಿದರು. ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಜಯಶೀಲ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಯಕುಮಾರ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಬಿ.ಮಾಲತಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಡಿ.ಸಂತೋಷ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಮಂಜುನಾಥ್, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಯೋಜನಾ ಸಮನ್ವಯಾಧಿಕಾರಿ ಆರ್. ರಮೇಶ್ ಕಾರ್ಯಕ್ರಮದಲ್ಲಿದ್ದರು. ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಹೆಚ್.ಡಿ.ರೇವಣ್ಣ ವಂದಿಸಿದರು
Formation of anti-drug awareness committee mandatory
Leave a comment