ಕಳಸ: ‘ಸಂಸೆಯ ಬಸ್ತಿಗದ್ದೆ ಪ್ರದೇಶದ ನಾಗೇಶ್ ಎಂಬುವರ ಮೇಲೆ ಕುದುರೆಮುಖ ಪೊಲೀಸ್ ಸಿಬ್ಬಂದಿ ಹಲ್ಲೆ ನಡೆಸಿದ್ದು, ಈ ಸಂಬಂಧ ಮುಖ್ಯಮಂತ್ರಿ ಮತ್ತು ಗೃಹಮಂತ್ರಿಗೆ ಪತ್ರ ಬರೆಯಲಾಗಿದೆ’ ಎಂದು ಕಳಸ ತಾಲ್ಲೂಕು ಹಸಲರ ಸಂಘದ ಅಧ್ಯಕ್ಷ ಲಿಂಗಪ್ಪ ನಂತೂರು ತಿಳಿಸಿದ್ದಾರೆ.
ಪೊಲೀಸ್ ಕಾನ್ಸ್ಟೆಬಲ್ ನಡೆಸಿದ ಹಲ್ಲೆಯಿಂದ ಒಳಗಾಗಿ ಚಿಕ್ಕಮಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಾಗೇಶ್ ಅವರನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳ ಜತೆ ಭೇಟಿ ಮಾಡಿ ಮಾತನಾಡಿದ ಅವರು, ಯುವಕನ ಮೇಲೆ ಹಲ್ಲೆ ನಡೆಸಿದ ಪೊಲೀಸ್ ಕಾನ್ಸ್ಟೆಬಲ್ ಸಿದ್ದೇಶ್ ಅವರನ್ನು ಸೇವೆಯಿಂದ ವಜಾ ಮಾಡಬೇಕು ಎಂದು ಒತ್ತಾಯಿಸಲಾಗಿದೆ ಎಂದು ತಿಳಿಸಿದರು.
ನಾಗೇಶ್ ಕಣ್ಣಿಗೆ ಹಾನಿ ಆಗಿದ್ದು, ಅನೇಕ ದಿನಗಳ ಚಿಕಿತ್ಸೆ ಅಗತ್ಯ ಇದೆ ಎಂದು ವೈದ್ಯರು ತಿಳಿಸಿದ್ದಾರೆ. ಪೊಲೀಸ್ ಕಾನ್ಸ್ಟೆಬಲ್ ಸಿದ್ದೇಶ್ ಅವರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮಾನತು ಮಾಡಿದ್ದಾರೆ. ಆದರೆ ಇನ್ನೂ ಹೆಚ್ಚಿನ ಕ್ರಮ ಆಗಬೇಕು. ತಪ್ಪಿದರೆ ನಾವು ಬೃಹತ್ ಹೋರಾಟ ನಡೆಸುತ್ತೇವೆ ಎಂದರು.
ದಸಂಸ ರಾಜ್ಯ ಸಮಿತಿ ಸದಸ್ಯೆ ಆಶಾ ಸಂತೋಷ್, ಜಿಲ್ಲಾ ಸಂಘಟನಾ ಸಂಚಾಲಕ ಸಂತೋಷ್, ಜಿಲ್ಲಾ ಪ್ರಧಾನ ಸಂಚಾಲಕ ಮಂಜಯ್ಯ, ಪೂರ್ಣೇಶ್ ಈ ವೇಳೆ ಉಪಸ್ಥಿತರಿದ್ದರು.
Letter to Home Minister demanding action against constable
Leave a comment