ಚಿಕ್ಕಮಗಳೂರು: ಅನ್ನಪೂರ್ಣ ಆಸ್ಪತ್ರೆಯ ಸಂಸ್ಥಾಪಕರಾಗಿದ್ದ ಮತ್ತು ನಗರದ ಹೆಸರಾಂತ ಮಕ್ಕಳ ತಜ್ಞರಾಗಿದ್ದ ಡಾ. ಸುಂದರೇಶ್ (72 ವರ್ಷ) ನಿಧನರಾಗಿದ್ದಾರೆ. ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೇ ಶುಕ್ರವಾರ ರಾತ್ರಿ ಬೆಂಗಳೂರಿನ ಅಕ್ಷಾ ಅಸ್ಪತ್ರೆಯಲ್ಲಿ ಕೊನೆಯುಸಿರೆಳಿದಿದ್ದಾರೆ.
ಚಿಕ್ಕಮಗಳೂರು ಅನ್ನಪೂರ್ಣ ಆಸ್ಪತ್ರೆಯಲ್ಲಿ ಇಂದು(ಶನಿವಾರ) ಸಂಜೆ 3 ಗಂಟೆವರೆಗೆ ಅವರ ಪಾರ್ಥೀಪ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ನಂತರ ಕದ್ರಿಮಿದ್ರಿಯ ಅನ್ನಪೂರ್ಣ ಫಾರ್ಮ್ ಹೌನ್ ನಲ್ಲಿ ವೀರಶೈವ-ಲಿಂಗಾಯತ ಸಂಪ್ರದಾಯದಂತೆ ಸ್ವಾಮೀಜಿಗಳ ನೇತೃತ್ವದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.
ಡಾ. ಸುಂದರೇಶ್ ಅವರು ಅಲ್ಲೂರು ಸಮೀಪದ ಯಲಗುಡಿಗೆಯ ಮಾಜಿ ರಾಜ್ಯ ಸಭಾ ಸದಸ್ಯ ಬಸಪ್ಪ . ಶೆಟ್ಟಿ ಮತ್ತು ಶ್ರೀಮತಿ ಅನ್ನಪೂರ್ಣಮ್ಮನವರ ಕಿರಿಯ ಪುತ್ರರಾಗಿದ್ದರು. 1976 ರಲ್ಲಿಯೇ ಚಿಕ್ಕಮಗಳೂರು ನಗರದಲ್ಲಿ ಅನ್ನಪೂರ್ಣ ಆಸ್ಪತ್ರೆ ಪ್ರಾರಂಭಿಸಿ ಜನರಿಗೆ ಸೇವೆ ನೀಡುತ್ತಾ ಬಂದಿದ್ದರು. ಇವರು ಪ್ರಸಿದ್ಧ ಮಕ್ಕಳ ತಜ್ಞರಾಗಿದ್ದರು.
ಇವರ ಇಡೀ ಕುಟುಂಬವೇ ವೈದ್ಯಕೀಯ ವೃತ್ತಿಯಲ್ಲಿ ನಿರತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಪತ್ನಿ ಡಾ. ನಂದ ಅವರು ಪ್ರಸೂತಿ ತಜ್ಞರಾಗಿದ್ದಾರೆ. ಮಗ ಡಾ. ನಿಖಿಲ್ ಹೃದ್ರೋಗ ತಜ್ಞರಾಗಿದ್ದಾರೆ. ನೊನೆ ಡಾ. ರೇವತಿ ಪ್ರಸೂಚಿ ತಜ್ಞರಾಗಿದ್ದಾರೆ. ಇವರೆಲ್ಲರೂ ಅನ್ನಪೂರ್ಣ ಆಸ್ಪತ್ರೆಯಲ್ಲಿಯೇ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಮಗಳು ಡಾ. ಮಾಧುರಿ ಅಳಿಯ ಡಾ. ಸುಮಂತ್ ಬೆಂಗಳೂರಿನಲ್ಲಿ ತಮ್ಮದೇ ಆದ ಅಕ್ಷಾ ಆಸ್ಪತ್ರೆಯನ್ನು ನಡೆಸುತ್ತಿದ್ದಾರೆ.
ಡಾ. ಸುಂದರೇಶ್ ಅವರು ಸಹೋದರರಾದ ರೇಣುಕಾರ್ಯ, ಬಿ. ಬಸವರಾಜು, ಸಹೋದರಿಯರು, ಪತ್ನಿ, ಮಕ್ಕಳು, ಅಪಾರ ಬಂಧುಗಳನ್ನು ಅಗಲಿದ್ದಾರೆ. ಡಾ. ಸುಂದರೇಶ್ ಅವರ ಅಗಲಿಕೆಗೆ ಜಿಲ್ಲೆಯ ವಿವಿಧ ಸಂಘನಂಸ್ಥೆಗಳು, ಜನಪ್ರತಿನಿಧಿಗಳು ತೀವ್ರ ಸಂತಾಪ ವ್ಯಕ್ತಪಡಿಸಿವೆ.
Dr. Sundaresh of Annapurna Hospital passes away
Leave a comment