ಚಿಕ್ಕಮಗಳೂರು: ಕಾಫಿ ಕೃಷಿಕರು ತಮ್ಮ ತೋಟ ಜಮೀನಿನ ಅಭಿವೃದ್ಧಿಗೆಂದು ರಾಷ್ಟ್ರೀಕೃತ ಮತ್ತು ಕರ್ನಾಟಕ ಗ್ರಾಮೀಣ ಬ್ಯಾಂಕ್‌ಗಳಲ್ಲಿ ಸಾಲ ಮಾಡಿದ್ದು, ಹವಾಮಾನ ವೈಪರೀತ್ಯ, ಬೆಲೆಯ ಏರಿಳಿತ, ಕಾಫಿ ತೋಟಗಳ ನಿರ್ವಹಣ ವೆಚ್ಚ ಹೆಚ್ಚಳ ಮುಂತಾದ ಕಾರಣಗಳಿಂದ ಸಕಾಲದಲ್ಲಿ ಸಾಲವನ್ನು ರೈತರು ಮರುಪಾವತಿ ಮಾಡಲು ಸಾಧ್ಯವಾಗಿಲ್ಲ ಎಂದು ಮೂಡಿಗೆರೆ ತಾಲ್ಲೂಕು ರೈತರ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಬಿ.ಕೆ. ಲಕ್ಷ್ಮೀಣ್ ಕುಮಾರ್ ತಿಳಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಆರ್ಥಿಕ ನಷ್ಟದಿಂದಾಗಿ ರೈತರು ಸಾಲ ಮರುಪಾವತಿ ಮಾಡಲು ವಿಳಂಭವಾಗುತ್ತಿರುವುದರಿಂದ ಇದನ್ನು ನೆಪವಾಗಿಟ್ಟುಕೊಂಡು ಬ್ಯಾಂಕ್‌ಗಳು ರೈತರ ಜಮೀನುಗಳನ್ನು ಹರಾಜು ಮಾಡುತ್ತಿವೆ. ಕಾಫಿ ಕೃಷಿ ವಾಣಿಜ್ಯ ಬೆಳೆಯಾಗಿದ್ದು, ಸರ್ಫೇಸಿ ಕಾಯ್ದೆ ವ್ಯಾಪ್ತಿಗೆ ಬರುತ್ತದೆ ಎಂದು ಬ್ಯಾಂಕಿನವರು ಸುಸ್ತಿಯಾಗಿರುವ ಬೆಳೆಗಾರರ ಜಮೀನನ್ನು ಹರಾಜು ಮಾಡುತ್ತಿದ್ದಾರೆಂದು ಆರೋಪಿಸಿದರು.
ಈಗಾಗಲೇ ರಾಜ್ಯದ ಕಾಫಿ ಬೆಳೆಯುವ ಪ್ರದೇಶಗಳ ಸಾವಿರಾರು ರೈತರಿಗೆ ನೋಟೀಸ್ ನೀಡಿದ್ದು, ಈ ಸಂಬಂಧ ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ ಅವರು ಲೋಕಸಭೆಯಲ್ಲಿ ವಿಷಯ ಪ್ರಸ್ತಾಪಿಸಿದಾಗ ವಾಣಿಜ್ಯ ಸಚಿವರು ತೋಟಗಾರಿಕಾ ಬೆಳೆಗಳಿಗೆ ಸರ್ಫೇಸಿ ಕಾಯ್ದೆ ಅನ್ವಯವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರೂ ಬ್ಯಾಂಕ್‌ಗಳು ಸಚಿವರ ಹೇಳಿಕೆಯನ್ನು ಉಲ್ಲಂಘಿಸಿ ಆನ್‌ಲೈನ್ ಮೂಲಕ ಹರಾಜು ಮಾಡುತ್ತಿವೆ ಎಂದು ದೂರಿದರು.
ಬ್ಯಾಂಕ್ ಮ್ಯಾನೇಜರ್‌ಗಳು ಮತ್ತು ಕೆಲವು ಮಧ್ಯವರ್ತಿಗಳು ಲಾಭದಾಸೆಗಾಗಿ ಜಮೀನು ಹರಾಜು ಹಾಕಲು ಲಾಭಿ ನಡೆಸುತ್ತಿದ್ದಾರೆ. ಇದರಲ್ಲಿ ಕೆಲವು ಭೂಮಾಫಿಯಗಳು ಕೈಜೋಡಿಸಿರುವುದನ್ನು ಖಂಡಿಸಿದರು.
ಆನ್‌ಲೈನ್ ಹರಾಜು ಪ್ರಕ್ರಿಯೆಯನ್ನು ಮುಂದುವರೆಸಿದಲ್ಲಿ ಎಲ್ಲಾ ರೈತಪರ ಕಾರ್ಮಿಕ ಸಂಘಟನೆಗಳು ಬೆಳೆಗಾರರ ಸಂಘಟನೆಗಳ ನೇತೃತ್ವದಲ್ಲಿ ತೀವ್ರವಾದ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.
ಕಾಫಿ ಸೇರಿದಂತೆ ಎಲ್ಲಾ ತೋಟಗಾರಿಕೆಗಳ ಮೇಲಿನ ಸಾಲವನ್ನು ಸರ್ಫೇಸಿ ಕಾಯ್ದೆಯಿಂದ ಹೊರಗಿಟ್ಟು ಕೇಂದ್ರಸರ್ಕಾರ ಕಾಯ್ದೆಯನ್ನು ಜಾರಿಗೆ ತರಬೇಕು, ಕಾಫಿ ಬೆಳೆಯುವ ರೈತರ ಸುಸ್ತಿ ಸಾಲಕ್ಕೆ ಈ ಹಿಂದೆ ನೀಡಿದ್ದ ವಿದರ್ಭ ಪ್ಯಾಕೇಜ್ ಮಾದರಿಯಲ್ಲಿ ಘೋಷಣೆ ಮಾಡಿ ರೈತರು, ಬೆಳೆಗಾರರ ನೆರವಿಗೆ ಧಾವಿಸಬೇಕೆಂದು ಮನವಿ ಮಾಡಿದರು.
ಕೆಪಿಸಿಸಿ ವಕ್ತಾರ ಹೆಚ್.ಹೆಚ್. ದೇವರಾಜ್ ಮಾತನಾಡಿ ಸರ್ಫೇಸಿ ಕಾಯಿದೆ ಹೆಸರಿನಲ್ಲಿ ಕೇಂದ್ರ ಸರ್ಕಾರ ಕಾಫಿ ಬೆಳೆಗಾರರು-ರೈತರ ಭೂಮಿಯನ್ನು ಆನ್‌ಲೈನ್ ಮೂಲಕ ಹರಾಜು ಹಾಕುತ್ತಿರುವುದನ್ನು ಕೂಡಲೇ ಕೈಬಿಡಬೇಕೆಂದು ಆಗ್ರಹಿಸಿದರು.
ಈಗಾಗಲೇ ಮೂಡಿಗೆರೆ ತಾಲ್ಲೂಕಿನಲ್ಲಿ ಹರಾಜು ಹಾಕಿರುವ ಭೂಮಿಯನ್ನು ಸಂಬಂಧಿಸಿದವರಿಗೆ ವಾಪಾಸ್ ನೀಡಬೇಕೆಂದು ಒತ್ತಾಯಿಸಿದರು.
ಕಾಫಿ ಕೃಷಿ ಮೇಲಿನ ಸಾಲವನ್ನು ಸರ್ಫೇಸಿ ಕಾಯಿದೆಯಿಂದ ಹೊರಗಿಡಬೇಕು, ಕೇಂದ್ರ ಸರ್ಕಾರ ಈ ಕಾಯಿದೆಯನ್ನು ಜಾರಿಮಾಡಿರುವುದರಿಂದ ಇದರ ನೈತಿಕ ಹೊಣೆಯನ್ನು ಕೇಂದ್ರವೇ ಹೊರಬೇಕು, ಸಂಸದರು ಈ ಬಗ್ಗೆ ಗಂಭೀರವಾಗಿ ಪರಿಗಣಿಸಬೇಕೆಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಸಿಪಿಐ ಮುಖಂಡ ಹೆಚ್.ಎಂ ರೇಣುಕಾರಾಧ್ಯ, ಜೆಡಿಎಸ್‌ನ ಮಂಜಪ್ಪ, ರೈತ ಸಂಘದ ಗುರುಶಾಂತಪ್ಪ, ರೈತ ಹಿತರಕ್ಷಣಾ ವೇದಿಕೆ ಉಪಾಧ್ಯಕ್ಷ ಜಿ.ಯು. ಚಂದ್ರೇಗೌಡ, ಪ್ರಧಾನ ಕಾರ್ಯದರ್ಶಿ ಹೆಚ್.ಇ ಸುರೇಂದ್ರ, ಕಾರ್ಯದರ್ಶಿ ಎಂ.ಕೆ. ರವಿ, ಸಂತ್ರಸ್ಥ ವಿಜಯ್ ಕುಮಾರ್ ಡಿ.ಆರ್ ಉಪಸ್ಥಿತರಿದ್ದರು.
Growers’ organizations protest against online auction process
Leave a comment