ಚಿಕ್ಕಮಗಳೂರು: ಅಲ್ಪಸಂಖ್ಯಾತರ ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ಎಚ್ಚರ ವಹಿಸಲು ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಯು.ನಿಸಾರ್ ಅಹಮದ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇಂದು ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪ್ರಧಾನ ಮಂತ್ರಿಗಳ ಹೊಸ ೧೫ ಅಂಶಗಳ ಕಾರ್ಯಕ್ರಮ ಅನುಷ್ಠಾನದ ಕುರಿತು ಪ್ರಗತಿ ಪರಿಶೀಲನಾ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಅಂಗನವಾಡಿ ಶಿಕ್ಷಕರಿಗೆ ಹಾಗೂ ಸಹಾಯಕಿಯರಿಗೆ ಮಕ್ಕಳನ್ನು ಅವರ ಮಾತೃ ಭಾಷೆಯಲ್ಲಿ ಮಾತನಾಡಿಸುವ ಸಾಮರ್ಥ್ಯ ಇರಬೇಕು ಹಾಗೂ ಅಂಗನವಾಡಿ, ಶಾಲಾ ಶಿಕ್ಷಣದಿಂದ ವಂಚಿತರಾಗಿರುವ ಮಕ್ಕಳನ್ನು ಗುರುತಿಸಿ ಅಂತವರನ್ನು ಪುನಃ ಶಾಲೆಗೆ ದಾಖಲಿಸಿ ಅವರಿಗೆ ವಿದ್ಯಾಭ್ಯಾಸ ನೀಡಲು ಸೂಚಿಸಿದರು.
ಸಂವಾದದಲ್ಲಿ ಅಲ್ಪಸಂಖ್ಯಾತರ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಅಭಿವೃದ್ಧಿ ಬಗ್ಗೆ ಚರ್ಚಿಸಲಾಯಿತು. ಅಲ್ಪಸಂಖ್ಯಾತರ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಅಭಿವೃದ್ಧಿಗಾಗಿ ಪ್ರಧಾನ ಮಂತ್ರಿಗಳ ೧೫ ಅಂಶಗಳ ಕಾರ್ಯಕ್ರಮಕ್ಕೆ ಸಂಬಂಧಿಸಿದ ಇಲಾಖೆಯ ಎಲ್ಲಾ ಕಾರ್ಯಕ್ರಮಗಳಲ್ಲಿ ಸಾಧ್ಯವಾದ? ಆರ್ಥಿಕ ಮತ್ತು ಭೌತಿಕ ಗುರಿಗಳಿಗೆ ಅನುಗುಣವಾಗಿ ಪ್ರಗತಿ ಸಾಧಿಸಲು ಸೂಚಿಸಿದರು.
ಐ.ಟಿ.ಐ. ಕಾಲೇಜುಗಳಲ್ಲಿ ದಾಖಲಾತಿ ಹೆಚ್ಚಿಸುವ ಸಲುವಾಗಿ ಮನೆ ಮನೆ ಸಮೀಕ್ಷೆ ಮಾಡಿ ಎಸ್.ಎಸ್.ಎಲ್.ಸಿ.ಯಲ್ಲಿ ಉತ್ತೀರ್ಣ ಹಾಗೂ ಅನುತ್ತೀರ್ಣರಾಗಿರುವ ವಿದ್ಯಾರ್ಥಿಗಳ ಮನವೊಲಿಸಿ ಅವರನ್ನು ತಮ್ಮ ಕಾಲೇಜಿಗೆ ದಾಖಲಾತಿ ಮಾಡಿಕೊಳ್ಳುವ ನಿಟ್ಟಿನಲ್ಲಿ ಕ್ರಮ ವಹಿಸುವಂತೆ ಸೂಚಿಸಿದರು.
ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಸಿ.ಎನ್. ಮಾತನಾಡಿ, ಉದ್ಯೋಗಸ್ಥ ಮಹಿಳಾ ವಸತಿ ನಿಲಯಗಳನ್ನು ಜಿಲ್ಲೆಯಲ್ಲಿ ಸ್ಥಾಪಿಸಲು ಸರ್ಕಾರದ ಹಂತದಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೆ ಶಿಫಾರಸ್ಸು ಮಾಡಲು ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರಿಗೆ ಮನವಿ ಮಾಡಿದರು.
ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರ ಆಪ್ತ ಸಹಾಯಕ ಮುಜೀಬುಲ್ಲಾ ಜಫಾರಿ, ಅಲ್ಪಸಂಖ್ಯಾತರ ಆಯೋಗದ ಸದಸ್ಯ, ನಿವೃತ್ತ ಐಎಎಸ್ ಅಧಿಕಾರಿ ಅಬ್ದುಲ್ ಖಾದರ್, ಜಿ.ಪಂ. ಕಾರ್ಯ ನಿರ್ವಹಣಾಧಿಕಾರಿ ಹೆಚ್.ಎಸ್.ಕೀರ್ತನಾ, ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
Officials instructed to be vigilant about children deprived of education
Leave a comment