ತರೀಕೆರೆ: ‘ಪರಿಶಿಷ್ಟ ಜಾತಿಯಲ್ಲಿ ರುವ 101 ಜಾತಿಗಳಿಗೂ ಅವರ ಜನಸಂಖ್ಯೆಗೆ ಅನುಗುಣವಾಗಿ ಒಳ ಮೀಸಲಾತಿ ಒದಗಿಸಿ ನ್ಯಾಯ ದೊರಕಿಸಲು ಸಮೀಕ್ಷೆ ನಡೆಯುತ್ತಿದೆ’ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು.
ತಾಲ್ಲೂಕಿನ ಗೋಪಾಲ ಬೂಸೇನಹಳ್ಳಿ ಗ್ರಾಮದಲ್ಲಿ ಮುಖಂಡ ಬಿ.ಎನ್.ಚಂದ್ರಪ್ಪ ಅವರ ಮನೆಯಲ್ಲಿನ ಖಾಸಗಿ ಕಾರ್ಯಕ್ರಮಕ್ಕೆ ಬಂದಾಗ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
‘ಸುಪ್ರಿಂಕೋರ್ಟ್ ತೀರ್ಪಿನಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಸಂವಿಧಾನಬದ್ಧವಾಗಿ ಸಮೀಕ್ಷೆ ನಡೆಯುತ್ತಿದೆ. ಇದಕ್ಕಾಗಿ ಮಾದಿಗ ಸಮಾಜದ ಹಲವಾರು ಸಂಘಟನೆಗಳು 35 ವರ್ಷಗಳಿಂದಲೂ ಹೋರಾಟ ನಡೆಸಿದ್ದವು. ಈ ಹೋರಾಟ ಒಂದು ಜಾತಿಗೆ ಸೀಮಿತವಾಗದೆ 101 ಜಾತಿಗಳಿಗೂ ನ್ಯಾಯ ದೊರಕಿಸುವ ಹೋರಾಟವಾಗಿತ್ತು’ ಎಂದರು.
‘ದತ್ತಾಂಶ ದಾಖಲಿಸುವ ಸಮೀಕ್ಷೆ ಸಂದರ್ಭ ಪರಿಶಿಷ್ಟರು ಆದಿ ಆಂಧ್ರ, ಆದಿ ಕರ್ನಾಟಕ ಮತ್ತು ಆದಿ ದ್ರಾವಿಡ ಎಂದು ಬರೆಸುವಾಗ ಅವರ ಮೂಲ ಜಾತಿಯನ್ನು ನಮೂದಿಸಿಕೊಳ್ಳಬೇಕು. ಸರ್ಕಾರದ ಸವಲತ್ತು ಪಡೆದುಕೊಳ್ಳಲು ಇದು ನೆರವಾಗುತ್ತದೆ. ಸಮೀಕ್ಷೆಯು ನ್ಯಾ.ನಾಗಮೋಹನ್ ದಾಸ್ ನೇತೃತ್ವದಲ್ಲಿ ನಡೆಯುತ್ತಿದ್ದು, ಅವರಿಂದ ಪ್ರತಿಯೊಬ್ಬರಿಗೂ ನ್ಯಾಯ ಸಿಗುತ್ತದೆ’ ಎಂದರು.
‘ದಕ್ಷಿಣ ಭಾರತದಲ್ಲೇ ಕರ್ನಾಟಕದಲ್ಲಿ ಶೇ 65ರಿಂದ 70ರಷ್ಟು ಬಿಪಿಎಲ್ ಕಾರ್ಡ್‍ಗಳನ್ನು ವಿತರಿಸಲಾಗಿದೆ. ಕೇರಳ, ತಮಿಳುನಾಡು, ಆಂಧ್ರಪ್ರದೇಶದಲ್ಲಿ ಈ ಪ್ರಮಾಣ ಶೇ 50ರಷ್ಟೂ ಮೀರಿಲ್ಲ. ಸರ್ಕಾರವು ಸದ್ಯದಲ್ಲೇ ಎಪಿಎಲ್ ಮತ್ತು ಬಿಪಿಎಲ್ ಹೊಸ ಕಾರ್ಡ್ ವಿತರಣೆಗೆ ಅವಕಾಶ ಮಾಡಿಕೊಡಲಿದೆ. ಹಿಂದಿನ ಸರ್ಕಾರದಲ್ಲಿ ಸುಮಾರು 2.95 ಲಕ್ಷ ಕಾರ್ಡ್‍ದಾರರ ಅರ್ಜಿಗಳು ನನೆಗುದಿಗೆ ಬಿದ್ದಿದ್ದವು. ನಮ್ಮ ಸರ್ಕಾರ ಬಂದ ನಂತರ ಅವುಗಳನ್ನು ಪರಿಶೀಲಿಸಿ ಸುಮಾರು 90 ಸಾವಿರ ಬಿಪಿಎಲ್ ಕಾರ್ಡ್‍ಗಳನ್ನು ಗುರುತಿಸಲಾಗಿದೆ. ಉಳಿದವುಗಳನ್ನು ಎಪಿಎಲ್ ಕಾರ್ಡ್‍ಗಳಾಗಿ ಗುರುತಿಸಲಾಗಿದೆ’ ಎಂದರು.
‘ಬಿಪಿಎಲ್ ಕಾರ್ಡ್‍ದಾರರು ಕೇವಲ ಅರ್ಜಿ ಸಲ್ಲಿಸಿದರೆ ಸಾಲದು. ಬಹುತೇಕ ಬಿಪಿಎಲ್ ಕಾರ್ಡ್‍ದಾರರು ಒಟ್ಟು ಕುಟುಂಬದಿಂದ ವಿಭಕ್ತ ಕುಟುಂಬಗಳಾಗಿ ಹೊರ ಹೋಗಿದ್ದು, ಅಂಥವರು ಪ್ರತ್ಯೇಕವಾಗಿ ವಾಸಿಸುತ್ತಿರುವ ಬಗ್ಗೆ ತಹಶೀಲ್ದಾರ್ ಮೂಲಕ ದೃಢೀಕರಣ ಸಲ್ಲಿಸಿ ಕಾರ್ಡ್ ಪಡೆಯಬಹುದಾಗಿದೆ’ ಎಂದರು.
‘ಈ ಹಿಂದಿನ ಸರ್ಕಾರವಿದ್ದಾಗ ಕಲ್ಲು ಮಣ್ಣು ಮಿಶ್ರಿತ ರಾಗಿ ವಿತರಿಸಲಾಗುತ್ತಿದ್ದುದನ್ನು ಮನಗಂಡು ನಾವು ಅಧಿಕಾರಕ್ಕೆ ಬಂದ ನಂತರ ರಾಗಿಯನ್ನು ಯಂತ್ರಗಳಲ್ಲಿ ಶುದ್ಧೀಕರಿಸಿ ವಿತರಿಸುತ್ತಿದ್ದೇವೆ. ಶುದ್ಧ ಮಾಡಿರದ ರಾಗಿ ವಿತರಿಸಿದರೆ ಅಂಥವರ ವಿರುದ್ಧ ಕ್ರಮ ಜರುಗಿಸಿ, ಶುದ್ಧ ರಾಗಿಯನ್ನು ವಿತರಿಸಲಾಗುವುದು’ ಎಂದರು.
ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ರಾಜ್ಯ ಆಹಾರ ನಿಗಮದ ಅಧ್ಯಕ್ಷ ಬಿ.ಎನ್.ಕೃಷ್ಣಮೂರ್ತಿ, ಮುಖಂಡರಾದ ರಾಜಣ್ಣ, ಉತ್ಸವ್, ಮಣಿಕಂಠ, ಬಾಲಾಜಿ ಇದ್ದರು.
Survey to provide internal reservation to Scheduled Castes and ensure justice
Leave a comment