ಚಿಕ್ಕಮಗಳೂರು: ಹೊಲದಲ್ಲಿ ಕುರಿಗಳನ್ನು ಕಾಯುತ್ತಿದ್ದ ಕುರಿಗಾಹಿಗೆ ಸಿಡಿಲು ಬಡಿದ ಪರಿಣಾಮ ಕುರಿಗಾಹಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಕಡೂರು ತಾಲೂಕಿನ ಗೆದ್ದೆಹಳ್ಳಿ ಗ್ರಾಮದಲ್ಲಿ ಮಂಗಳವಾರ ನಡೆದಿದೆ.
ಗ್ರಾಮದ ಜಮೀನಿನಲ್ಲಿ ಕುರಿಗಳನ್ನು ಕಾಯುತ್ತಿದ್ದ ಲೋಕೇಶಪ್ಪ (೪೮) ಎಂಬವರು ಸಿಡಿಲು ಬಡಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮಧ್ಯಾಹ್ನದ ಬಳಿಕ ಜಿಲ್ಲೆಯ ವಿವಿಧ ಭಾಗಗಳಲ್ಲಿ ವರುಣ ಧಾರಾಕಾರವಾಗಿ ಗುಡುಗು ಸಿಡಿಲಿನೊಂದಿಗೆ ಅಬ್ಬರಿಸಿದ ಪರಿಹಾದು ಈ ಘಟನೆ ನಡೆದಿದೆ.
ಚಿಕ್ಕಮಗಳೂರು, ಶೃಂಗೇರಿ, ಕೊಪ್ಪ, ಎನ್.ಆರ್.ಪುರ, ತರೀಕೆರೆ, ಕಡೂರು ಹಾಗೂ ಅಜ್ಜಂಪುರ ತಾಲೂಕುಗಳಲ್ಲಿ ಮಧ್ಯಾಹ್ನದ ಬಳಿಕ ಮಳೆ ಬಂದಿದೆ.
ಚಿಕ್ಕಮಗಳೂರು ನಗರ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಮಧ್ಯಾಹ್ನ ೪.೨೫ರ ವೇಳೆಗೆ ಗುಡುಗು ಸಹಿತ ಆರಂಭವಾದ ಮಳೆ ಸುಮಾರು ಎರಡು ಗಂಟೆಗೂ ಹೆಚ್ಚು ಕಾಲ ಧಾರಾಕಾರವಾಗಿ ಸುರಿಯಿತು.
ಮಳೆಯ ಅರ್ಭಟದಿಂದಾಗಿ ರಸ್ತೆಗಳಲ್ಲಿ ಜನರ ಓಡಾಟ ಕಡಿಮೆಯಾಗಿತ್ತು. ಕೊಪ್ಪ ತಾಲೂಕಿನ ಭಂಡಿಗಡಿ, ಹರಿಹರಪುರ, ನಾರ್ವೆ ಭಾಗದಲ್ಲಿ ಮಧ್ಯಾಹ್ನ ೪ ಗಂಟೆಗೆ ಸಾಧಾರಣ ಮಳೆ ಬಂದಿದ್ದು, ತರೀಕೆರೆ ತಾಲೂಕಿನಲ್ಲಿ ಸಂಜೆ ೫ ಗಂಟೆಯ ವೇಳೆಗೆ ಗುಡುಗು ಸಹಿತ ತುಂತುರು ಮಳೆ ಸುರಿಯಿತು.
ಕಡೂರಿನಲ್ಲಿ ಸಂಜೆ ೭ ಗಂಟೆಗೆ ಸಾಧಾರಣ ಮಳೆಯಾಗಿದ್ದರೆ, ಎನ್.ಆರ್.ಪುರ ತಾಲೂಕಿನ ಸೀತೂರು, ಕಾನೂರು ಸುತ್ತಮುತ್ತ ಸಂಜೆ ೪ ಗಂಟೆಗೆ ಸಾಧಾರಣ ಮಳೆ ಬಂದಿತು. ಶೃಂಗೇರಿ ತಾಲೂಕಿನಲ್ಲೂ ಸಂಜೆ ೭ ಗಂಟೆಯ ವೇಳೆಗೆ ಗುಡುಗು ಸಹಿತ ಮಳೆ ಬಂದಿತು.
Shepherd struck by lightning dies on the spot
Leave a comment