ಚಿಕ್ಕಮಗಳೂರು: ನಗರವನ್ನು ಹಸಿರೀಕರಣಗೊಳಿಸುವ, ಸ್ವಚ್ಛ-ಸುಂದರಗೊಳಿಸುವ ಸಂಬಂಧ ವಿವಿಧ ಸಂಘಟನೆಗಳ ಪ್ರಮುಖರೊಂದಿಗೆ ನಗರಸಭೆ ಅಧ್ಯಕ್ಷರು ಸಮಾಲೋಚನೆ ನಡೆಸಿ, ಸಲಹೆ-ಸೂಚನೆಗಳನ್ನು ಆಲಿಸಿದರು.
ನಗರಸಭೆ ಸಭಾಂಗಣದಲ್ಲಿ ಇಂದು ನಡೆದ ಸಭೆಯ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅಧ್ಯಕ್ಷೆ ಸುಜಾತ ಶಿವಕುಮಾರ್, ನಗರವನ್ನು ಹಸಿರೀಕರಣಗೊಳಿಸುವುದು ಸೇರಿದಂತೆ, ಸ್ವಚ್ಛತೆ, ನೀರು ಸರಬರಾಜು, ರಸ್ತೆ ಇನ್ನಿತರೆ ಮೂಲ ಸೌಕರ್ಯಗಳನ್ನು ಸಮಗ್ರವಾಗಿ ಅನುಷ್ಠಾನಗೊಳಿಸುವ ಕುರಿತಂತೆ ಚರ್ಚಿಸಲಾಗಿದೆ ಎಂದು ತಿಳಿಸಿದರು.
ನಗರದ ಅಭಿವೃದ್ಧಿ ದೃಷ್ಟಿಯಿಂದ ಅಸ್ಥಿತ್ವಕ್ಕೆ ಬಂದಿರುವ ಟ್ರಸ್ಟ್‌ಗಳು, ಸಂಘಟನೆಗಳು ಮತ್ತು ವೈಯಕ್ತಿಯ ಆಸಕ್ತಿ ಹೊಂದಿರುವ ವ್ಯಕ್ತಿಗಳೊಂದಿಗೆ ಸಮಾಲೋಚನೆ ನಡೆಸಲಾಗಿದೆ. ಪ್ಲಾಸ್ಟಿಕ್ ಮುಕ್ತ ಆರೋಗ್ಯಕರ ನಗರವನ್ನಾಗಿಸುವುದು ಸಭೆಯ ಉದ್ದೇಶವಾಗಿತ್ತು ಎಂದರು.
ಈಗಾಗಲೇ ನಮ್ಮ ನಗರ ಸ್ವಚ್ಛತೆಯಲ್ಲಿ ರಾಜ್ಯದಲ್ಲೇ ಎರಡನೇ ಸ್ಥಾನ ಗಳಿಸಿದೆ. ಮನುಷ್ಯರಿಗೆ ಅಗತ್ಯ ಸೌಕರ್ಯಗಳ ಜೊತೆಗೆ ಪ್ರಾಣಿ, ಪಕ್ಷಿಗಳಿಗೂ ನೆರಳು, ನೀರು, ಆಹಾರ ಆಶ್ರಯಕ್ಕಾಗಿ ಮರ ಗಿಡಗಳು, ಶೆಲ್ಟರ್‌ಗಳು ಬೇಕಾಗಿದೆ. ಈ ನಿಟ್ಟನಿಲ್ಲಿ ಒಂದಷ್ಟು ಉಪಯುಕ್ತ ಹಣ್ಣಿನ ಗಿಡಗಳನ್ನು ನಡೆಬೇಕು ಎನ್ನುವ ಉದ್ದೇಶವಿದೆ. ಇದಕ್ಕಾಗಿ ಅರಣ್ಯ ಇಲಾಖೆ ಅಧಿಕಾರಿಗಳ ಜೊತೆ ಚರ್ಚಿಸಿದ್ದೇವೆ. ಗಿಡಗಳನ್ನು ನೀಡುತ್ತೇವೆ ಎಂದು ಭರವಸೆ ನೀಡಿದ್ದಾರೆ ಎಂದರು.
ಇದೇ ವೇಳೆ ಸಂಘ-ಸಂಸ್ಥೆಗಳು ಗಿಡಗಳನ್ನು ನೆಡುವ ಕಾರ್ಯಕ್ಕೆ ತಾವು ಕೈ ಜೋಡಿಸುವುದಾಗಿ ಭರವಸೆ ನೀಡಿವೆ. ನಗರಸಭೆ ಕಡೆಯಿಂದ ನೀರಿನ ವ್ಯವಸ್ಥೆ ಮಾಡಲು ಕೋರಿದ್ದಾರೆ. ಅದಕ್ಕೆ ನಾವು ಸಿದ್ಧರಿದ್ದೇವೆ ಎಂದು ತಿಳಿಸಿದರು.
ಮುಂದಿನ ದಿಗಳಲ್ಲಿ ನಗರವನ್ನು ಇನ್ನಷ್ಟು ಸುಂದರ ಹಾಗೂ ಸ್ವಚ್ಛ ನಗರವನ್ನಾಗಿ ಮಾರ್ಪಡಿಸುತ್ತೇವೆ. ಒಳ್ಳೆಯ ಆಮ್ಲ ಜನಕ ನೀಡುವ, ನೆರಳು ನೀಡುವ ಮರ-ಗಿಡಗಳನ್ನು ನೆಟ್ಟು ಎಲ್ಲರಿಗೂ ಅನುಕೂಲ ಕಲ್ಪಿಸಲು ಈ ಅಭಿಯಾನ ಹಮ್ಮಿಕೊಂಡಿದ್ದೇವೆ ಎಂದು ಹೇಳಿದರು.
ನಗರದ ೫೩ ವಾರ್ಡ್‌ಗಳಲ್ಲಿ ಯಾವುದೇ ಪಕ್ಷ ಬೇಧವಿಲ್ಲದೆ, ವಿದ್ಯಾರ್ಥಿಗಳು, ಪ್ರಮುಖರು, ಮಹಿಳೆಯರು, ಸ್ವಸಹಾಯ ಸಂಘಗಳು ಸೇರಿ ಟ್ರಸ್ಟ್ ರಚಿಸಿಕೊಂಡು ಕಸ ನಿರ್ವಹಣೆ ಹೊಣೆ ಹೊರುವ ಜೊತೆಗೆ ಮಕ್ಕಳಿಂದ ಗಿಡಗಳನ್ನು ನೆಡಿಸುವ ಮತ್ತು ನೀರುಣಿಸುವ ಹಾಗೂ ಪ್ರತಿ ಗಿಡಕ್ಕೆ ಸುಂದರವಾದ ಒಂದು ಹೆಸರಿಟ್ಟು ಸಲಹುವುದರಿಂದ ಪ್ರಕೃತಿ ಜೊತೆ ಹೊಂದಾಣಿಕೆ ಹೇಗಿರಬೇಕು ಎನ್ನುವುದನ್ನು ಮಕ್ಕಳಿಗೆ ಮನವರಿಕೆ ಮಾಡಿಕೊಟ್ಟಂತಾಗುತ್ತದೆ. ವಾತಾವರಣ ಶುದ್ಧವಾಗುತ್ತದೆ ಇದಕ್ಕೆ ಸಾರ್ವಜನಿಕರು ಕೈ ಜೋಡಿಸಬೇಕು ಎಂದು ಮನವಿ ಮಾಡುತ್ತೇವೆ ಎಂದರು.
ಸ್ವಚ್ಛ ಟ್ರಸ್ಟ್ ಈಗಾಗಲೇ ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಹಾಗೆಯೇ ವಾರ್ಡ್‌ಗಳಲ್ಲಿ ಆಸಕ್ತರಿದ್ದರೆ ಆಯಾಯ ವಾರ್ಡ್‌ನ ಪಾರ್ಕ್‌ಗಳನ್ನು ಅಭಿವೃದ್ಧಿಪಡಿಸಲು ಜವಾಬ್ದಾರಿ ವಹಿಸಿಕೊಡಲಾಗುವುದು. ಈಗಾಗಲೇ ರೋಟರಿ ಸಂಸ್ಥೆ ಒಂದು ಪಾರ್ಕ್‌ನ ನಿರ್ವಹಣೆಯ ಜವಾಬ್ದಾರಿಯನ್ನು ವಹಿಸಿಕೊಂಡಿದೆ ಎಂದರು.
ದೊಡ್ಡ ದೊಡ್ಡ ವಾಣಿಜ್ಯ ಸಂಸ್ಥೆಗಳು, ಖಾಸಗಿ ಶಿಕ್ಷಣ ಸಂಸ್ಥೆಗಳು ಪಾರ್ಕ್‌ಗಳ ನಿರ್ವಹಣೆಗೆ ಮುಂದೆ ಬಂದಲ್ಲಿ ಅವರ ಸಂಸ್ಥೆ ಹೆಸರಿನಲ್ಲೇ ಫಲಕಗಳನ್ನು ಹಾಕಿಸಿಕೊಡಲು ನಗರಸಭೆ ಸಿದ್ಧವಿದೆ ಎಂದು ತಿಳಿಸಿದರು.
ಸಭೆಯಲ್ಲಿ ವಿವಿಧ ಸಂಘಟನೆ, ಟ್ರಸ್ಟ್‌ನ ಮುಖ್ಯಸ್ಥರು, ಪರಿಸರಾಸಕ್ತರು, ವಾಣಿಜ್ಯೋದ್ಯಮಿಗಳು ಉಪಸ್ಥಿತರಿದ್ದರು, ಸಲಹೆ-ಸೂಚನೆಗಳನ್ನು ನೀಡಿದರು.
Chikmagalur City Council holds meeting to discuss greening
Leave a comment