ಚಿಕ್ಕಮಗಳೂರು : ಸರ್ಫೇಸಿ ವಿಚಾರವಾಗಿ ಬ್ಯಾಂಕುಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲು ಸಾಧ್ಯವಾಗದಿದ್ದರೆ ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ್ ಪೂಜಾರಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಲಿ ಎಂದು ಕೆಪಿಸಿಸಿ ವಕ್ತಾರ ಎಚ್ಎಸ್ ದೇವರಾಜ್ ಒತ್ತಾಯಿಸಿದ್ದಾರೆ.
ನಗರದ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಫೇಸಿ ಕಾಯ್ದೆಯಡಿ ಹರಾಜಿಗೆ ಬಂದ ಜಮೀನು ಮಾಲೀಕರಿಂದ ಸಾಲ ವಸೂಲಾತಿಗೆ ಆರು ತಿಂಗಳು ಕಾಲಾವಕಾಶಕ್ಕೆ ಸಂಸದರು ಸಭೆ ನಡೆಸಿ ಸೂಚನೆ ನೀಡಿದ್ದರು ಬ್ಯಾಂಕುಗಳು ಸಂಸದರ ಸೂಚನೆಯನ್ನು ಪಾಲಿಸುತ್ತಿಲ್ಲ, ಸಂಸದರ ಮಾತಿಗೆ ಗೌರವ ನೀಡದ ಬ್ಯಾಂಕುಗಳ ಈ ಧೋರಣೆಗೆ ನೀವು ಹೊಣೆ ಹೊತ್ತು,
ತಮ್ಮ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು.
ಕಾಲಾವಕಾಶ ನೀಡಿದ ನಡುವೆಯೂ ಡಿಸೆಂಬರ್ 20ಕ್ಕೆ ಮತ್ತೆ ಬೆಳೆಗಾರರ ಜಮೀನು ಆನ್ಲೈನ್ ಹರಾಜಿಗೆ ನೋಟಿಸ್ ಬ್ಯಾಂಕುಗಳಿಂದ ಬಂದಿದ್ದು, ಉದ್ದಟತನದ ಬ್ಯಾಂಕುಗಳ ಮೇಲೆ ಕ್ರಮ ಕೈಗೊಳ್ಳಿ ಎಂದಿರುವ ಅವರು, ಕೇಂದ್ರ ಸರ್ಕಾರದ ವಾಣಿಜ್ಯ ಸಚಿವರ ಮಾತಿಗೂ ಡೋಂಟ್ ಕೇರ್ ಎಂದಿರುವ ಕೆನರಾ ಬ್ಯಾಂಕ್ ಬೆಳೆಗಾರರ ಮೇಲೆ ಗದ ಪ್ರಹಾರ ಮಾಡುತ್ತಿದೆ. ಕಳೆದ ತಿಂಗಳು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಂಸದರು ನಡೆಸಿದ ಸಭೆಗೆ ಬೆಲೆ ಇಲ್ಲದಂತಾಗಿದ್ದು, ಇಲ್ಲಿನ ಕೆಲ ವಾಣಿಜ್ಯ ಬ್ಯಾಂಕುಗಳು ಭಾರತದಲ್ಲಿ ಇದ್ದಾವೋ ಅಥವಾ ಅಮೆರಿಕ,ಚೀನಾ ದೇಶಗಳಲ್ಲಿ ಇದ್ದಾವೋ ತಿಳಿಯದಂತಾಗಿದೆ. ಹಿಟ್ಲರ್ ಮಾದರಿಯ ಧೋರಣೆ ಅನುಸರಿಸುತ್ತಿರುವ ಇವರಿಗೆ ತಕ್ಕ ಪಾಠ ಕಲಿಸಬೇಕಿದೆ. ಅಥವಾ ಕೇಂದ್ರ ಸರ್ಕಾರವೇ ಬೆಳೆಗಾರರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ ಎಂಬ ಗುಮಾನಿ ಮೂಡುವಂತೆ ಮಾಡಿದೆ. ಇದು ಸಂಸದರ ವಿಫಲತೆ ಆಗಿದ್ದು, ಇದರ ಹಿಂದಿರುವ ತಂತ್ರಗಾರಿಕೆ ಆದರೂ ಏನು ಎಂಬುದನ್ನು ಸಂಸದರು ಸ್ಪಷ್ಟಪಡಿಸಲಿ ಎಂದರು.
ಸದ್ಯ ಅಕಾಲಿಕ ಮಳೆಯಿಂದಾಗಿ ಕಾಫಿ ಬೆಳೆ ತೀವ್ರ ನಷ್ಟ ಅನುಭವಿಸುವಂತೆ ಆಗಿದೆ. ಈ ಸಂಕಷ್ಟದ ಸಮಯದಲ್ಲಿ ಕೇಂದ್ರ ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ಬೆಳೆಗಾರರ ನೆರವಿಗೆ ಧಾವಿಸಬೇಕು. ಹರಾಜಿಗೆ ಬಂದಿರುವ ಬೆಳೆಗಾರರ ಜಮೀನು ಖರೀದಿಸಲು ಯಾವುದೇ ಬಿಲ್ಡರ್ ಗಳು ಬಿಡ್ ಮಾಡಬೇಡಿ ಎಂದು ಮನವಿ ಮಾಡಿರುವ ಅವರು, ಈ ಪರಿಸ್ಥಿತಿ ಹೀಗೆ ಮುಂದುವರೆದರೆ ಬ್ಯಾಂಕಿನ ಯಾವುದೇ ಅಧಿಕಾರಿ ಹಾಗೂ ಸಿಬ್ಬಂದಿ ಹಳ್ಳಿಗಳಿಗೆ ಬರಲು ಬಿಡುವುದಿಲ್ಲ ಎಂಬ ಎಚ್ಚರಿಕೆಯನ್ನು ನೀಡಿದರು.
ಇತ್ತೀಚಿನ ದಿನಗಳಲ್ಲಿ ಪ್ರಕೃತಿ ವಿಕೋಪದಿಂದ ಕಾಫಿ ಬೆಳೆ ಹಾಗೂ ಅದರ ಉದ್ಯಮ ನಷ್ಟ ಅನುಭವಿಸುವಂತೆ ಆಗಿದೆ. ಇದೇ ವೇಳೆ ಕಾಫಿ ಮಂಡಳಿ ಅಧ್ಯಕ್ಷರ ವಿರುದ್ಧವು ಆಕ್ರೋಶ ವ್ಯಕ್ತಪಡಿಸಿದ ಹೆಚ್ ಹೆಚ್ ದೇವರಾಜ್, ಹತಾಶ ಮನೋಭಾವದಿಂದ ಹೇಳಿಕೆ ನೀಡುತ್ತಿರುವ ದಿನೇಶ್ ದೇವವೃಂದ ನಿದ್ರೆ ಮಾಡುತ್ತಿದ್ದಾರಾ..?. ಯಾವುದೋ ಒಂದು ಹೇಳಿಕೆ ನೀಡಿ ಓಡಿ ಹೋಗುವುದಲ್ಲ, ನೇರನಾಗಿ ಮಾತನಾಡುವ ವ್ಯಕ್ತಿಯಲ್ಲ. ಬ್ಯಾಂಕುಗಳಿಗೆ ಮನವಿ ಮಾಡುವುದನ್ನು ಬಿಟ್ಟು ಕೇಂದ್ರ ಸಚಿವರಿಂದ ಆದೇಶ ಕೊಡಿಸಿ ಎಂದು ಕಿಡಿ ಕಾರಿದರು.
Leave a comment