ಚಿಕ್ಕಮಗಳೂರು : ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಕಾಫಿ ಬೆಳೆ ಸರ್ಫೇಸಿ ಕಾಯ್ದೆ ವ್ಯಾಪ್ತಿಗೆ ಬರೋದಿಲ್ಲ ಎಂದು ಲೋಕಸಭೆಗೆ ಲಿಖಿತ ಉತ್ತರ ನೀಡಿದ್ದಾರೆ. ಆದರೆ ಬ್ಯಾಂಕುಗಳು ಸರ್ಫೇಸಿ ಕಾಯ್ದೆ ಅಡಿ ಕಾಫಿ ತೋಟಗಳನ್ನ ಹರಾಜು ಹಾಕಿರುವುದಕ್ಕೆ ಬ್ಯಾಂಕುಗಳ ಮೇಲೆ ಕೇಂದ್ರ ಸರ್ಕಾರ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಕೆಪಿಸಿಸಿ ವಕ್ತಾರ ರವೀಶ್ ಕ್ಯಾತನಬೀಡು ಒತ್ತಾಯಿಸಿದ್ದಾರೆ.
ಸರ್ಫೇಸಿ ಕಾಯ್ದೆ ಒಳಗೆ ಕಾಫಿ ಬೆಳೆ ಬರುವುದಿಲ್ಲ ಎನ್ನುವುದಾದರೆ ವಾಣಿಜ್ಯ ಬ್ಯಾಂಕುಗಳು ಕಾಯ್ದೆಯನ್ನು ದುರುಪಯೋಗ ಪಡಿಸಿಕೊಂಡಿವೆ. ಬೆಳೆಗಾರರ ಮೇಲೆ ದೌರ್ಜನ್ಯವನ್ನು ಮಾಡುತ್ತಿವೆ. ಈ ಹುನ್ನಾರದಲ್ಲಿ ಕೇಂದ್ರ ಸರ್ಕಾರವೇ ಶಾಮೀಲಾಗಿ ಭೂಮಿ ಕಬಳಿಸುವ ದಂಧೆಯಲ್ಲಿ ತೊಡಗಿದೆಯೇ ಎಂದು ಪ್ರಶ್ನಿಸಿರುವ ರವೀಶ್, ಕೂಡಲೇ ಕಾಫಿ ಬೆಳೆಯುವ ಮೂರು ಜಿಲ್ಲೆಗಳ ಜಿಲ್ಲಾಧಿಕಾರಿಗಳು, ರಾಷ್ಟ್ರೀಕೃತ ಬ್ಯಾಂಕುಗಳ ಜೊತೆ ಸಭೆ ನಡೆಸಿ ರೈತರಿಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಬೇಕು.
ಯಾವ ಬ್ಯಾಂಕು ಕಾನೂನಿಂದ ವಿರುದ್ಧ ನಡೆದುಕೊಳ್ಳುತ್ತಿದೆ ಆ ಬ್ಯಾಂಕುಗಳ ಮುಖ್ಯಸ್ಥರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಇದೆ ವೇಳೆ ಮಾತನಾಡಿದ ಅವರು, ಕೃಷಿ ಸಂಬಂಧಿ ಸಾಲಗಳಿಗೆ ಸಿಬಿಲ್ ಸ್ಕೋರ್ ಅನ್ವಯಿಸದಂತೆ ಬ್ಯಾಂಕುಗಳು ಕ್ರಮ ವಹಿಸಬೇಕು, ಕೃಷಿ ಚಟುವಟಿಕೆಗಳಿಗೆ ರೈತರು ಪಡೆದ ಸಾಲಗಳಿಗೆ ಸಿಬಿಲ್ ಅನ್ವಯ ಆಗದಂತೆ ನೋಡಿಕೊಳ್ಳಬೇಕು ಎಂದು ಒತ್ತಾಯಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಮೂಡಿಗೆರೆ ಮಾಜಿ ಶಾಸಕ ಎಂ ಪಿ ಕುಮಾರಸ್ವಾಮಿ, ಕೂಡಲೇ ಯಾವ ಯಾವ ಬೆಳೆಗಾರರಿಗೆ ಸರ್ಫೇಸಿ ಕಾಯ್ದೆ ಮೂಲಕ ನೋಟಿಸ್ ನೀಡಲಾಗಿದೆ ಅಂತಹ ರೈತರನ್ನು ಉಳಿಸುವ ಕೆಲಸವಾಗಬೇಕು. ಈ ಕೂಡಲೇ ಜಿಲ್ಲಾಧಿಕಾರಿ ರಾಷ್ಟ್ರೀಕೃತ ಬ್ಯಾಂಕುಗಳಿಗೆ ಸೂಚನೆ ನೀಡಿ ಮನವರಿಕೆ ಮಾಡುವಂತೆ ಒತ್ತಾಯಿಸಿದ್ದಾರೆ. ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಸರ್ಫೇಸಿ ಕಾಯ್ದೆ ಅಡಿ ಹರಾಜಿಗೆ ಬಂದಿರುವ ಬೆಳೆಗಾರರ ಜಮೀನು ಮಾಲೀಕರಿಂದ ಬ್ಯಾಂಕ್ ಸಾಲ ಮರುಪಾವತಿಗೆ ಆರು ತಿಂಗಳು ಸಮಯ ಅವಕಾಶ ಏಕೆ ಕೊಡಿಸಿದರು ಎಂದು ಪ್ರಶ್ನಿಸಿದರು. ಕಾಫಿ ಬೆಳೆಗಾರರು ಯಾವುದೇ ಗೊಂದಲಕ್ಕೆ ಸಿಲುಕಬಾರದು ಈ ಬಗ್ಗೆ ಬ್ಯಾಂಕುಗಳ ಜೊತೆ ವ್ಯವಹರಿಸುವಾಗ ಸರ್ಫೇಸಿ ಕಾಯ್ದೆ ಏನು ಹೇಳುತ್ತದೆ ಎಂಬುದರ ಬಗ್ಗೆ ಬ್ಯಾಂಕುಗಳ ಮುಖ್ಯಸ್ಥರಿಂದ ಮಾಹಿತಿ ಸರಿಯಾಗಿ ಪಡೆಯಬೇಕು ಎಂದು ಸಲಹೆ ನೀಡಿದರು.
Leave a comment