ಚಿಕ್ಕಮಗಳೂರು : ಪ್ರವಾಸಕ್ಕೆ ಬಂದಾಗ ಜಲಪಾತದ ಬಳಿ ಈಜಲು ಹೋಗಿದ್ದ ಛತ್ತೀಸ್’ಘಡ ಮೂಲದ ಬೆಂಗಳೂರು ಟೆಕ್ಕಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಕೆಮ್ಮಣ್ಣುಗುಂಡಿ ಸಮೀಪದ ಹೆಬ್ಬೆ ಜಲಪಾತದ ಬಳಿ ನಡೆದಿದೆ. ಮೃತನನ್ನ 30 ವರ್ಷದ ಅಮಿತ್ ಕುಮಾರ್ ಎಂದು ಗುರುತಿಸಲಾಗಿದೆ. ಮೃತ ಅಮಿತ್ ಕುಮಾರ್ ಮೂಲತಃ ಛತ್ತೀಸ್ಗಢದ ಯುವಕ. ಅವಿವಾಹಿತ. ಬೆಂಗಳೂರಿನಲ್ಲಿ ತಮಿಳುನಾಡು ಮೂಲದ ಸಲಾಂ ಕರೀಂ ಎಂಬ ಯುವಕನ ಜೊತೆ ಸೇರಿಕೊಂಡು ರೂಂ ಮಾಡಿದ್ದನು. ಇಬ್ಬರು ಸಾಫ್ಟ್ ವೇರ್ ಉದ್ಯೋಗಿಗಳಾಗಿದ್ದು ಒಂದೇ ರೂಮಿನಲ್ಲಿ ಇದ್ದುಕೊಂಡು ಬೇರೆ-ಬೇರೆ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ದೀಪಾವಳಿ ಹಾಗೂ ಕನ್ನಡ ರಾಜ್ಯೋತ್ಸವದ ಹಿನ್ನೆಲೆ ನಾಲ್ಕು ದಿನಗಳ ಕಂಟಿನ್ಯೂ ರಜೆ ಇದ್ದ ಕಾರಣ ಚಿಕ್ಕಮಗಳೂರು ಜಿಲ್ಲೆಗೆ 3 ದಿನಗಳ ಹಿಂದೆಯೇ ಪ್ರವಾಸಕ್ಕೆ ಬಂದಿದ್ದರು. ಜಿಲ್ಲೆಯ ನಾನಾ ಭಾಗದ ಪ್ರವಾಸಿ ತಾಣಗಳನ್ನ ನೋಡಿಕೊಂಡು ಭಾನುವಾರ ಮಧ್ಯಾಹ್ನದ ವೇಳೆಗೆ ಹೆಬ್ಬೆ ಜಲಪಾತದ ಬಳಿ ಬಂದಿದ್ದರು. ಹೆಬ್ಬೆ ಜಲಪಾತ ಸುಮಾರು 120 ಅಡಿ ಎತ್ತರದಿಂದ ನೀರು ಧುಮ್ಮಿಕ್ಕುವ ಜಲಪಾತ. ಈ ಜಲಪಾತದ ಬಳಿ ಇಬ್ಬರೂ ಈಜಲು ಹೋದಾಗ ಈ ದುರ್ಘಟನೆ ಸಂಭವಿಸಿದೆ. ಸ್ಥಳದಲ್ಲಿದ್ದ ಫಾರೆಸ್ಟ್ ಡಿಪಾರ್ಟ್ಒ ಗಾರ್ಡ್ ಗಳು ಅಲ್ಲಿ ಆಳ ಇದೆ, ಹೋಗಬೇಡಿ ಎಂದು ಹೇಳಿದ್ದರೂ ಕೂಡ ಈಜಲು ಹೋದ ಅಮಿತ್ ಈಜು ಬಾರದ ಕಾರಣ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಆತನ ಸ್ಮೇಹಿತ ಲಾಲ್ ಕರೀಂ ಕೂಡ ನೀರಿನಲ್ಲಿ ಮುಳುಗಿ ಅಸ್ವಸ್ಥನಾದಾಗ ಸ್ಥಳಿಯರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗಳು ಆತನನ್ನ ರಕ್ಷಿಸಿದ್ದಾರೆ. ಆದರೆ, ಈಜು ಬಾರದ ಅಮಿತ್ ನೀರಿನಲ್ಲಿ ಮುಳುಗು ಸಾವನ್ನಪ್ಪಿದ್ದಾನೆ. ಸ್ಥಳಕ್ಕೆ ಲಿಂಗದಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಲಿಂಗದಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Leave a comment