ಚಿಕ್ಕಮಗಳೂರು : ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿದ್ದ ಅನ್ವರ್ ಕೊಲೆಯಾಗಿ ಆರು
ವರ್ಷ ಕಳೆದಿದ್ದು ಇದುವರೆಗೂ ಕೊಲೆಗಾರ ಪತ್ತೆಯಾಗಿಲ್ಲ, ಈ ಹಿನ್ನೆಲೆಯಲ್ಲಿ ಸಿಓಡಿ ಎಡಿಜಿಪಿ ಬಿ.ಕೆ. ಸಿಂಗ್ ಪ್ರಕರಣದ ತನಿಖೆಗೆ ಇಳಿದಿದ್ದು ಶನಿವಾರ ನಗರಕ್ಕೆ ಆಗಮಿಸಿ ಘಟನೆಯಮಾಹಿತಿ ಕಲೆ ಹಾಕಿದ್ದಾರೆ.
ಬಿಜೆಪಿ ಮುಖಂಡ ಅನ್ವರ್ ಅವರನ್ನು 2018 ಜೂ.22 ರಂದು ಗೌರಿಕಾಲುವೆ ಗುಡ್ ಮಾರ್ನಿಂಗ್ ಶಾಪ್ ಸಮೀಪದಲ್ಲಿ ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಈ ಪ್ರಕರಣ ಇಡೀ ಚಿಕ್ಕಮಗಳೂರು ನಗರವನ್ನು ಬೆಚ್ಚಿ ಬೀಳಿಸಿತ್ತು. ಈ ಪ್ರಕರಣವನ್ನು 2019ರಲ್ಲಿ ಅಂದಿನ ಬಿಜೆಪಿ ಸರ್ಕಾರ ಸಿಓಡಿಗೆ ವಹಿಸಿತ್ತು. ಆದರೂ ಅನ್ವರ್ ಕೊಲೆ ಪ್ರಕರಣದ ಆರೋಪಿಗಳ ಪತ್ತೆ ಸಾಧ್ಯವಾಗಿರಲಿಲ್ಲ.
ಅನ್ವರ್ ಕೊಲೆ ಪ್ರಕರಣದ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಬೇಕೆಂದು ಅನ್ವರ್ ಕುಟುಂಬದವರು ಚಿಕ್ಕಮಗಳೂರು ನಗರದಲ್ಲಿ ಅನೇಕ ಬಾರೀ ಪ್ರತಿಭಟನೆ ನಡೆಸಿ ಸರ್ಕಾರವನ್ನು ಆಗ್ರಹಿಸಿದ್ದರು. ಜತೆಗೆ ಕೊಲೆ ಆರೋಪಿಗಳನ್ನು ಶೀಘ್ರವೇ ಬಂಧಿಸಿ ಇಲ್ಲವೇ ದಯಾಮರಣಕ್ಕೆ ಅನುಮತಿ ನೀಡುವಂತೆ ಪ್ರಧಾನ ಮಂತ್ರಿಗಳಿಗೆ ಪತ್ರ ಬರೆದಿದ್ದ ಘಟನೆ ನಡೆದಿತ್ತು.
ಕುಟುಂಬಸ್ಥರು ಪೊಲೀಸ್ ಇಲಾಖೆ, ರಾಜ್ಯ ಸರ್ಕಾರದ ಮೇಲೆ ಎಷ್ಟೇ ಒತ್ತಡ ತಂದರೂ ಕೊಲೆ ಆರೋಪಿಗಳ ಸುಳಿವಿಲ್ಲ. ಪ್ರಕರಣ ನಡೆದು ಆರು ವರ್ಷಗಳು ಕಳೆದಿದ್ದು, ನ್ಯಾಯಕ್ಕಾಗಿ ಮೊರೆ ಇಟ್ಟಿದ್ದ ಕುಟುಂಬ ಕೈಚೆಲ್ಲಿ ಕುಳಿತ್ತಿದೆ.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಎಡಿಜಿಪಿ ಬಿ.ಕೆ.ಸಿಂಗ್ ಅವರು ಖುದ್ದು ತನಿಖೆಗೆ ಇಳಿದಿದ್ದಾರೆ. ಶನಿವಾರ ನಗರಕ್ಕೆ ಆಗಮಿಸಿದ ಅವರು, ಅನ್ವರ್ ಕೊಲೆ ನಡೆದ ಜಾಗ, ಅಲ್ಲಿನ ಮಾರ್ಗಗಳು ಸೇರಿ ದಂತೆ ಪ್ರಕರಣಕ್ಕೆ ಸಂಬಂ ಧಿಸಿದ ಮಾಹಿತಿಯನ್ನು ಪ್ರಕರಣದ ತನಿಖೆ ನಡೆಸಿದ ಪೊಲೀಸ್ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ. ಈ ವೇಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿಕ್ರಮ್ ಅಮಟೆ, ಸೇರಿದಂತೆ ಇತರೆ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಇದ್ದರು.
ಬಾಾಾಾಾ
ಎಡಿಜಿಪಿ ಬಿ.ಕೆ.ಸಿಂಗ್ ಅವರು ಈ ಹಿಂದೆ ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದರು. ಸದ್ಯ ಅನ್ವರ್ ಕೊಲೆ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿದ್ದು, ನ್ಯಾಯಕ್ಕಾಗಿ ಹಂಬಲಿಸುತ್ತಿದ್ದ ಅನ್ವರ್ ಕುಟುಂಬದಲ್ಲಿ ಆಶಾ ಭಾವನೆ ಮೂಡಿಸಿದೆ.
Leave a comment