ಚಿಕ್ಕಮಗಳೂರು :
ಭಾರೀ ಮಳೆ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಜಿಲ್ಲೆಗೆ ಬರುವ ಪ್ರವಾಸಿಗರಿಗೆ ಕೊಟ್ಟಿರುವ ಸಲಹೆಯಲ್ಲಿ ಚಿಕ್ಕಮಗಳೂರಿಗೆ ಬರಲೇಬೇಡಿ ಎಂಬ ಅರ್ಥದಲ್ಲಿ ಆದೇಶ ಹೊರಡಿಸಿರುವುದು ರೆಸಾರ್ಟ್ ಗಳು ತೀವ್ರ ನಷ್ಟ ಅನುಭವಿಸುವಂತಾಗಿದೆ ಎಂದು ಚಿಕ್ಕಮಗಳೂರು ರೆಸಾರ್ಟ್ ಮಾಲೀಕರ ಸಂಘ ಹೇಳಿದೆ.
ನಗರದ ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘದ ಪದಾಧಿಕಾರಿಗಳು ಕಳೆದ ಎರಡು ದಿನಗಳ ಹಿಂದೆ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಹೊರಡಿಸಿರುವ ಅಡ್ವೈಸರಿ ನೋಟ್ ನಲ್ಲಿ ಮುಂದಿನ ಮೂರು ದಿನಗಳ ಕಾಲ ಚಿಕ್ಕಮಗಳೂರು ಜಿಲ್ಲೆಯ ಪ್ರವಾಸಿ ತಾಣಗಳಿಗೆ ಬರುವ ಪ್ರವಾಸಿಗರು ತಮ್ಮ ಪ್ರವಾಸ ಮುಂದೂಡಿ ಎಂದು ಹೇಳಿರುವುದು ಹೋಟೆಲ್ ಹಾಗೂ ರೆಸಾರ್ಟ್ ಉದ್ಯಮಕ್ಕೆ ಹೊಡೆತ ಕೊಟ್ಟಿದ್ದು ವ್ಯವಹಾರ ಕುಸಿತವಾಗಿದೆ
ಮಡಿಕೇರಿಯಲ್ಲಿ ಚಿಕ್ಕಮಗಳೂರು ಜಿಲ್ಲೆಗಿಂತ ಹೆಚ್ಚು ಮಳೆಯಾದರೂ ಅಲ್ಲಿನ ಜಿಲ್ಲಾಡಳಿತ ಇಂತಹ ಮಾರ್ಗಸೂಚಿ ಹೊರಡಿಸುವುದಿಲ್ಲ ಇಲ್ಲಿ ಮಾತ್ರ ಏಕೆ ಹೀಗೆ ಎಂದು ಪ್ರಶ್ನಿಸಿದ ರೆಸಾರ್ಟ್ ಮಾಲೀಕರ ಸಂಘದ ಅಧ್ಯಕ್ಷ ಎಸ್ಎನ್ ರಮೇಶ್ ಬೆಂಗಳೂರಿನಿಂದ ಬರುವ ಜನರು ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಬರುವ ಸುದ್ದಿಯನ್ನು ನೋಡಿ ಪ್ರವಾಸವನ್ನು ಮುಂದೂಡುತ್ತಿದ್ದಾರೆ ಎಂದರು. ಚಿಕ್ಕಮಗಳೂರು ಜಿಲ್ಲೆಯ ಪ್ರವಾಸೋದ್ಯಮ ಹೋಟೆಲ್ ರೆಸಾರ್ಟ್ ಅವಲಂಭಿಸಿದ್ದು ಸಾವಿರಾರು ಜನರಿಗೆ ಉದ್ಯೋಗ ಕಲ್ಪಿಸಿದ್ದೇವೆ ಅಲ್ಲದೇ ಸರ್ಕಾರಕ್ಕೆ ತೆರಿಗೆ ಸಾಕಷ್ಟು ಕಟ್ಟುತ್ತೇವೆ. ಜಿಲ್ಲಾಡಳಿತ ಇನ್ನು ಮುಂದೆ ಈ ರೀತಿಯ ಆದೇಶ ಹೊರಡಿಸುವ ಮೊದಲು ರೆಸಾರ್ಟ್ ಮಾಲೀಕರ ತೊಂದರೆಗಳನ್ನು ಗಮನದಲ್ಲಿ ಇರಿಸಿಕೊಂಡು ಸಲಹೆ ಕೊಡಲಿ ಎಂದು ಸಂಘ ಮನವಿ ಮಾಡಿದೆ.
Leave a comment